ಕನ್ನಡಪ್ರಭ ವಾರ್ತೆ ರಾಯಚೂರು
ಸಾಹಿತಿ, ಶಿಕ್ಷಣ ತಜ್ಞ ರಾಮಣ್ಣ ಹವಳೆ ಅವರ ಸಮ್ಮೇಳನಾಧ್ಯಕ್ಷರಾಗಿರುವ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಎರಡು ದಿನಗಳ ಕಾಲ ನಡೆಯಲಿದ್ದು ಅದಕ್ಕಾಗಿ ಕೈಗೊಂಡಿರುವ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದ ಸ್ವಾಗತ ಸಮಿತಿಯ ಸದಸ್ಯರು, ಅಧಿಕಾರಿ, ಸಿಬ್ಬಂದಿ, ಮುಖಂಡರು ಬ್ಯಾನರ್ ಬಂಟ್ಟಿಗ್ಸ್, ವೇದಿಕೆ, ಅಡುಗೆ, ಪ್ರಮುಖ ರಸ್ತೆ, ವೃತ್ತ, ಐತಿಹಾಸಿಕ ಕೋಟೆ-ಕಚೇರಿಗಳಲ್ಲಿ ದೀಪದಾಲಂಕಾರ, ಕನ್ನಡ ಬಾವುಟ ಕಟ್ಟುವುದು ಸೇರಿ ವಿವಿಧ ಕಾರ್ಮಿಕರು ಕನ್ನಡ ದೊಂದಿಗೆ ತೆಲುಗು ಹಾಗೂ ಹಿಂದಿ ಭಾಷೆಗಳನ್ನಾಡುತ್ತಾ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕನ್ನಡ ಸೇವೆಯು ‘అక్కడ- ఇక్కడ ఎక్కడైన మన కన్నడ’’(ಅಲ್ಲಿ-ಇಲ್ಲಿ ಎಲ್ಲಿಯಾದರು ನಮ್ಮ ಕನ್ನಡ), ‘अंदर बाहर हमारा कन्नड़ को जोहार’ (ಒಳಗೆ-ಹೊರಗೆ ನಮ್ಮ ಕನ್ನಡ ಕೋ ಜೋಹಾರ್) ಎನ್ನುವ ಘೋಷವಾಕ್ಯಗಳ ಸಂದೇಶದ ಜೊತೆಗೆ ನಾವು ತೆಲುಗು - ಹಿಂದಿ ಮಾತನಾಡಿದರೂ ನಮ್ಮ ಮನದಲ್ಲಿ ಕನ್ನಡವೇ ಸತ್ಯ-ಕನ್ನಡವೇ ನಿತ್ಯದ ನಿನಾದವೇ ಎಂಬ ಸತ್ಯ ಸಾರುತ್ತಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸದ್ಗುರು ವಿದ್ಯಾನಂದ ಶರಣರು ಡಬ್ಬೇರುಮಡುವು ಅವರ ಹೆಸರಿನ ವೇದಿಕೆ, ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ ಅವರ ಮಹಾ ಮಂಟಪ ಹಾಗೂ ವಿ.ಎಸ್.ಕಾಂತನವರ ಅವರ ಮಹಾದ್ವಾರ ಮಾಡಲಾಗಿದ್ದು, ಇದರೊಟ್ಟಿಗೆ ಡಾ.ರಾಜಶೇಖರ ನೀರಮಾನ್ವಿ, ಡಾ.ಎಚ್.ಚಂದ್ರಶೇಖರ, ಜಿ.ಸುರೇಶ ಹಾಗೂ ಜಿ.ವಿ.ಶರ್ಮಾ ಅವರ ದ್ವಾರಗಳನ್ನು ರೂಪಿಸಲಾಗಿದೆ.ಎರಡು ದಿನಗಳ ಸಮ್ಮೇಳನದಲ್ಲಿ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ,ಚಿತ್ರಕಲಾ ಪ್ರದರ್ಶನ,ವಾಣಿಜ್ಯ ಮಳಿಗೆಗಳ ಉದ್ಘಾಟನೆ, ಆದಿ ಅಮಾತೆಪ್ಪನವರ ಕೃತಿಗಳ ಬಿಡುಗಡೆ ಜೊತೆಗೆ ವಿವಿಧ ವಿಚಾರಗಳ 5 ಗೋಷ್ಠಿಗಳು,ತಲಾ 2 ಕವಿಗೋಷ್ಠಿ, ವಿಶೇಷ ಉಪನ್ಯಾಸ,ಸಾಂಸ್ಖೃತಿಕ ಕಾರ್ಯಕ್ರಮಗಳು, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ ಹಾಗೂ ಸಮಾರೋಪ ಮತ್ತು ಸನ್ಮಾನ ಸಮಾರಂಭಗಳನ್ನು ಆಯೋಜಿಸಲಾಗಿದೆ.
ಮೊದಲ ಗೋಷ್ಠಿಯಲ್ಲಿ ಜಿಲ್ಲಾ ದರ್ಶನ ವಿಚಾರ, ಎರಡನೇ ಗೋಷ್ಠಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಮತ್ತು ಸವಾಲುಗಳು ನಂತರ ಮಹಿಳಾ ಸಶಕ್ತೀಕರಣದಲ್ಲಿ ಸಾಹಿತ್ಯ ಮತ್ತು ಆಧ್ಯಾತ್ಮಿಕತೆ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಮೂರನೇ ಗೋಷ್ಠಿಯಾಗಿ ಮಹಿಳಾ ಕವಿಗೋಷ್ಠಿ ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
---
13ಕೆಪಿಆರ್ಸಿಆರ್ 02: ಸಮ್ಮೇಳನಾಧ್ಯಕ್ಷ ರಾಮಣ್ಣ ಹವಳೆ