ಕನ್ನಡಪ್ರಭ ವಾರ್ತೆ ಬೆಂಗಳೂರು
‘ನಮ್ಮ ಮುಂದಿನ ವಿಕೆಟ್ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್. ಅವರು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ’ ಎಂದೂ ಅವರು ಘೋಷಿಸಿದ್ದಾರೆ.
ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎಸ್ಐಆರ್ ವಿರೋಧಿ ಒಕ್ಕೂಟ, ಸಿಜೆಪಿ ಸೇರಿದಂತೆ ವಿವಿಧ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ನಡೆದ ‘ಜನತಾ ನ್ಯಾಯಾಲಯ’ ಹೆಸರಿನ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮತಗಳನ್ನು ಅಳಿಸಿ ಹಾಕುವ(ಡಿಲೀಟ್) ಮತ್ತು ಕದಿಯುವ ಮೂಲಕ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದರು ಎಂದು ಆರೋಪಿಸಿದರು.ಎಸ್ಐಆರ್ ವೇಳೆ ಸತ್ತಿದ್ದಾರೆ ಎಂದು ಘೋಷಿಸಿರುವ ಜನರು ಇಲ್ಲಿ ಜೀವಂತವಾಗಿ ನಿಂತಿದ್ದಾರೆ. ಹೀಗಾಗಿ ಇಲ್ಲಿ ಸಂಭವಿಸಿರುವುದು ಈ ಜನರ ಸಾವಲ್ಲ. ಇದು ಈ ದೇಶದ ಪ್ರಜಾಪ್ರಭುತ್ವದ ಸಾವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಆಯೋಗದ ಅಧಿಕಾರಿಗಳು ಜನರ ಮತಗಳನ್ನು ಅಳಿಸಿ ಹಾಕಿದ್ದಾರೆ ಎಂದು ದೂರಿದರು.
ಆರ್‌ಎಸ್‌ಎಸ್ ಸಿದ್ಧಾಂತವು ಎಲ್ಲರನ್ನೂ ಒಳಗೊಂಡ ಭಾರತ ಅಲ್ಲ. ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಮಹಾತ್ಮ ಗಾಂಧಿ ಅವರ ತತ್ವಗಳಲ್ಲಿ ಇವರಿಗೆ ನಂಬಿಕೆ ಇಲ್ಲ. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ತತ್ವಗಳಲ್ಲಿ ಇವರಿಗೆ ನಂಬಿಕೆಯಿದೆ. ನಮ್ಮ ಪ್ರಜಾಪ್ರಭುತ್ವ ಮತ್ತು ದೇಶವನ್ನು ಉಳಿಸಲು ನಾವು ಆ ಸಿದ್ಧಾಂತದ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ದೀಪ್ಕೆ ಹೇಳಿದರು.
ಬಿಜೆಪಿಗೆ ಹಾಕದ ಮತ ಡಿಲೀಟ್:
ದೇಶದಾದ್ಯಂತ 13 ಕೋಟಿ ಮತ್ತು ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಮತಗಳನ್ನು ತೆಗೆದುಹಾಕಲಾಗಿದೆ. ಈ ಸಂಖ್ಯೆಯು ನೋಂದಾಯಿತ ಮತದಾರರ ಪೈಕಿ ಶೇ.13 ರಿಂದ 14ರಷ್ಟಿದೆ. ಮೋದಿ ಅಲೆಯ ಉತ್ತುಂಗದ ಸಮಯದಲ್ಲೂ ಗೆಲ್ಲಲು ಸಾಧ್ಯವಾಗದಿದ್ದ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಇಂತಹ ಮತಗಳ ಅಳಿಸುವಿಕೆ ಪ್ರಮುಖ ಕಾರಣವಾಯಿತು ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿ 50 ಸಾವಿರ ಮತಗಳನ್ನು ತೆಗೆದುಹಾಕಲಾಗಿದೆ. ಅಲ್ಲಿ ಅವರು 15 ಸಾವಿರ ಮತಗಳಿಂದ ಸೋತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತಗಳನ್ನು ತೆಗೆದುಹಾಕಲಾಗಿದೆ. ಅಲ್ಲಿ ಅವರು ಸುಮಾರು 4 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತಗಳನ್ನು ತೆಗೆದು ಹಾಕಲಾಗಿದೆ. ಅಲ್ಲಿ ಗೆಲುವಿನ ಅಂತರ ಸುಮಾರು 9-10 ಸಾವಿರ ಇದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನದಿಂದಲೇ ನಿರ್ಗಮಿಸಿದರು ಎಂದು ಅಭಿಜಿತ್ ದೀಪ್ಕೆ ಕೆಲ ಉದಾಹರಣೆ ನೀಡಿದರು.
ನಾವು ಎಂದಿಗೂ ಕ್ಷೇತ್ರ ಮರು-ವಿಂಗಡಣೆಗೆ ಅವಕಾಶ ನೀಡುವುದಿಲ್ಲ. ಏಕೆಂದರೆ, ಭಾರತವನ್ನು ಮುನ್ನಡೆಸುವುದು ದಕ್ಷಿಣ ಭಾರತವೇ. ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟದಲ್ಲಿ ದಕ್ಷಿಣ ಭಾರತ ಮುಂಚೂಣಿಯಲ್ಲಿರುತ್ತದೆ ಮತ್ತು ಭವಿಷ್ಯದಲ್ಲಿ ಭಾರತವನ್ನು ದಕ್ಷಿಣ ಭಾರತವೇ ಮುನ್ನಡೆಸುತ್ತದೆ. ಪ್ರಜಾಪ್ರಭುತ್ವ ಮರಳಿ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
10ಕ್ಕೆ ದಿಲ್ಲಿಯಲ್ಲಿ ಹೋರಾಟಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಅ.10ರಂದು ದೆಹಲಿಯಲ್ಲಿ ನಡೆಯುವ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ
- ಅಭಿಜಿತ್ ದೀಪ್ಕೆ, ಸಿಜೆಪಿ ಸಂಸ್ಥಾಪಕ---