ಅರಸಿನಕೇರಿ ಗ್ರಾಮಕ್ಕೆ ಸರ್ವೆಗೆ ಬಂದ ಅಧಿಕಾರಿಗಳ ವಿರುದ್ಧ ಆಕ್ರೋಶ

KannadaprabhaNewsNetwork |  
Published : Jan 10, 2025, 12:48 AM IST
9ಕೆಪಿಎಲ್21 ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಸರ್ವೆಗೆ ಬಂದಿರುವ ಅಧಿಕಾರಿಗಳನ್ನು ಮಹಿಳೆಯರು ಅಡ್ಡಗಟ್ಟಿರುವುದು.9ಕೆಪಿಎಲ್22 ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ಮಾಡುತ್ತಿರುವುದು.9ಕೆಪಿಎಲ್23 ಅರಸಿನಕೇರಿ ಗ್ರಾಮದ ಬಳಿ ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳುಹಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಖನಿಜ ನಿಕ್ಷೇಪ ಸರ್ವೆಗೆ ಬಂದಿದ್ದ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಿಡಿಸಿದ್ದಲ್ಲದೆ, ಸರ್ವೆಗೆ ಅವಕಾಶ ನೀಡದೆ ಅಧಿಕಾರಿಗಳನ್ನು ತಡೆದ ಘಟನೆ ನಡೆದಿದೆ.

- ನಿಕ್ಷೇಪ ಸರ್ವೆಗೆ ಬಂದಿದ್ದೇವೆ ಎಂದರೂ ಪಟ್ಟುಬಿಡದ ಗ್ರಾಮಸ್ಥರು

- ಅಧಿಕಾರಿಗಳು ಪತ್ರ ಬರೆದುಕೊಟ್ಟ ಮೇಲೆ ಹಿಂದೆ ಸರಿದ ಗ್ರಾಮಸ್ಥರು

- ಅಣುಸ್ಥಾವರ ಸರ್ವೆಗಾಗಿಯೇ ಬಂದಿದ್ದಾರೆ ಎಂದು ಗ್ರಾಮಸ್ಥರು ಸಿಡಿಮಿಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಖನಿಜ ನಿಕ್ಷೇಪ ಸರ್ವೆಗೆ ಬಂದಿದ್ದ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಿಡಿಸಿದ್ದಲ್ಲದೆ, ಸರ್ವೆಗೆ ಅವಕಾಶ ನೀಡದೆ ಅಧಿಕಾರಿಗಳನ್ನು ತಡೆದ ಘಟನೆ ನಡೆದಿದೆ.

ನಿಕ್ಷೇಪ ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ಅಣುಸ್ಥಾವರ ಸ್ಥಾಪನೆಯ ಸರ್ವೆಗೆ ಬಂದಿದ್ದಾರೆ ಎಂದು ತಿಳಿದು ಆಕ್ರೋಶಗೊಂಡಿದ್ದ ಗ್ರಾಮಸ್ಥರು ದಿಢೀರ್ ಜಮಾಯಿಸಿ, ಅಧಿಕಾರಿಗಳನ್ನು ವಾಹನಗಳಲ್ಲಿಯೇ ತಡೆಗಟ್ಟಿ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ ನಾವು ಅಣು ವಿದ್ಯುತ್‌ ಸ್ಥಾವರ ಸ್ಥಾಪನೆಗೆ ವಿರೋಧಿಸಿ ಹೋರಾಟ ಮಾಡಿದ್ದೇವೆ. ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೇವೆ. ಆದರೂ ಸಹ ಮತ್ತ ಯಾಕೆ ಬಂದಿದ್ದೀರಿ ಎಂದು ಗ್ರಾಮಸ್ಥರು ಕಿಡಿಕಾರಿದರು.

ನಾವು ಅಣು ಸ್ಥಾವರ ಸ್ಥಾಪಿಸಲು ಸರ್ವೆಗೆ ಬಂದಿಲ್ಲ, ಖನಿಜ ನಿಕ್ಷೇಪ ಸಮೀಕ್ಷೆಗೆ ಬಂದಿದ್ದೇವೆ ಎಂದು ಅಧಿಕಾರಿಗಳು, ಭೂ ವಿಜ್ಞಾನಿಗಳು ಎಷ್ಟೇ ಪರಿಪರಿಯಾಗಿ ಬೇಡಿಕೊಂಡರು ಗ್ರಾಮಸ್ಥರು ಕೇಳದೆ ತರಾಟೆಗೆ ತೆಗದುಕೊಂಡು, ಇನ್ನೊಮ್ಮೆ ಇತ್ತ ಸುಳಿದರೆ ನೋಡಿ ಎಂದೆಲ್ಲಾ ಧಮ್ಕಿ ಹಾಕಿದರು.

ನಮ್ಮೂರ ಬಳಿ ಅಣು ವಿದ್ಯುತ್‌ ಸ್ಥಾವರ ಸ್ಥಾಪಿಸಲು ನಾವು ಬಿಡುವುದಿಲ್ಲ, ಖನಿಜ ನಿಕ್ಷೇಪ ಸರ್ವೆಗೂ ಅವಕಾಶ ನೀಡುವುದಿಲ್ಲ. ನೀವು ಏನು ಮಾಡುತ್ತೀರಿ ಎಂದು ನಮಗೆ ಹೇಗೆ ಗೊತ್ತಾಗಬೇಕು. ಅಣುಸ್ಥಾವರ ಸ್ಥಾಪಿಸುವುದಕ್ಕಾಗಿಯೇ ಖನಿಜ ನಿಕ್ಷೇಪ ಸರ್ವೇ ಮಾಡುತ್ತಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತು. ನಿಮ್ಮನ್ನು ನಾವು ಇಲ್ಲಿಂದ ಬಿಡುವುದೇ ಇಲ್ಲ ಎಂದು ಗ್ರಾಮಸ್ಥರು ಪಟ್ಟು ಬಿಡಿದರು. ಪರಿಸ್ಥಿತಿ ಕೈಮೀರುವ ಹಂತ ತಲುಪುವುದು ಗೊತ್ತಾಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದರು. ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಆದರೆ, ಗ್ರಾಮಸ್ಥರು ಇದ್ಯಾವುದಕ್ಕೂ ಜಗ್ಗಲೇ ಇಲ್ಲ. ನಮ್ಮ ಬಂಧಿಸಿ ಎಂದು ಮುನ್ನುಗ್ಗಲು ಪ್ರಾರಂಭಿಸಿದರು.

ಈ ನಡುವೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಾಲೂಕು ಅಧಿಕಾರಿ ಸನಿತ್ ಮಧ್ಯಪ್ರವೇಶ ಮಾಡಿ, ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಿದರು. ನೀವು ಕೂಡಲೇ ನಮಗೆ ಲಿಖಿತ ರೂಪದಲ್ಲಿ ಬರೆದುಕೊಡಿ ಎಂದು ಗ್ರಾಮಸ್ಥರು ತಾಕೀತು ಮಾಡಿದರು.

ವಿಧಿಯಿಲ್ಲದಾದ ತಾಲೂಕು ಅಧಿಕಾರಿ ನಾವು ಅಣು ವಿದ್ಯುತ್‌ ಸ್ಥಾವರ ಸ್ಥಾಪನೆ ಸರ್ವೆಗೆ ಬಂದಿಲ್ಲ. ಖನಿಜ ನಿಕ್ಷೇಪ ಸಮೀಕ್ಷೆ ಮಾಡುತ್ತೇವೆ. ಈ ರೀತಿ ಏಕಾಏಕಿ ಬಂದಿದ್ದು ತಪ್ಪಾಗಿದೆ. ಇನ್ನುಂದೆ ಬರುವುದಾದರೇ ಗ್ರಾಮಸ್ಥರಿಗೆ ಮಾಹಿತಿ ನೀಡಿ ಬರುತ್ತೇವೆ. ಈಗ ನಾವು ಸರ್ವೇ ಮಾಡುವುದನ್ನು ಬಿಟ್ಟು ವಾಪಸ್‌ ಹೋಗುತ್ತೇವೆ ಎಂದು ಪತ್ರ ನೀಡಿದ ಮೇಲೆ ಗ್ರಾಮಸ್ಥರು ಶಾಂತರಾದರು. ಬಳಿಕ ಅಧಿಕಾರಿಗಳು, ಪೊಲೀಸರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಹನುಮಂತಪ್ಪ ಹೊಳೆಯಾಚೆ, ಭೀಮಸೇನ ಕಲಿಕೇರಿ ಸೇರಿದಂತೆ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಸುಸ್ಥಿರ, ಬಹುಶಿಸ್ತೀಯ ಸಂಶೋಧನೆ ಅವಶ್ಯಕ: ಸಿದ್ದು ಅಲಗೂರ
ಟಿಕೆಟ್ ರಹಿತ ಪ್ರಯಾಣ: 8 ತಿಂಗಳಲ್ಲಿ ನೈಋತ್ಯ ರೈಲ್ವೆಯಿಂದ ₹ 45 ಕೋಟಿ ದಂಡ ವಸೂಲಿ