ಗದಗ: ತಾಲೂಕಿನ ರೋಣ ವಿಧಾನಸಭಾ ವ್ಯಾಪ್ತಿಯ ಕೋಟುಮಚಗಿ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಗುರುವಾರ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮುಳ್ಳುಕಂಟಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಸಮಸ್ಯೆ ಬಗೆಹರಿಸುವವರೆಗೂ ಯಾವೊಬ್ಬ ಅಧಿಕಾರಿಗಳಿಗೂ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಗಂಭೀರ ಸಮಸ್ಯೆ ಕಳೆದ ಎರಡು ತಿಂಗಳಿಂದ ಇದ್ದರೂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆಯೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದೇವೆ. ಮೌಖಿಕವಾಗಿ ಪಿಡಿಒಗಳಿಗೆ ತಿಳಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಕಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೂ ಪಂಚಾಯಿತಿ ಕಚೇರಿ ಬಾಗಿಲಿಗೆ ಹಚ್ಚಿರುವ ಮುಳ್ಳನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಈ ವರ್ತನೆಯಿಂದಾಗಿ ಗ್ರಾಪಂ ಅಧಿಕಾರಿಗಳು ಕಕ್ಕಾಬಿಕ್ಕಿಯಾದರೂ ಏನೇ ಹೇಳಿದರೂ ನೀರಿನ ಸಮಸ್ಯೆ ಬಗೆಹರಿಸುವುದಿದ್ದರೆ ಮಾತ್ರ ಮಾತನಾಡಿ. ಇಲ್ಲವಾದಲ್ಲಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವರೆಗೂ ನಾವ್ಯಾರೂ ಇಲ್ಲಿಂದ ಕದಲುವುದಿಲ್ಲ ಎಂದು ಅಲ್ಲಿದ್ದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಸಂಜೆ ವೇಳೆ ಗ್ರಾಮಕ್ಕೆ ಆಗಮಿಸಿದ ತಾಪಂ ಇಒ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಜನರ ಸಮಸ್ಯೆ ಆಲಿಸಿ, ನೀರು ಪೂರೈಕೆಯಲ್ಲಿರುವ ಸಮಸ್ಯೆಯನ್ನು ಗ್ರಾಮಸ್ಥರ ಜತೆಗೂಡಿ ವೀಕ್ಷಿಸಿ, ವಾರದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.