ಧಾರವಾಡ:
ಅಂಬ್ಲಿಕೊಪ್ಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮಾಜದ ಸಮುದಾಯವಿದ್ದು, ಗ್ರಾಮದ ಪ್ರಮುಖ ಆರಾಧ್ಯ ದೈವ ಬೀರಲಿಂಗೇಶ್ವರ ದೇವರು. ಈ ದೇವರ ಮೂರ್ತಿಯನ್ನು ದುಷ್ಕರ್ಮಿಗಳು ಹಾಳುಗೆಡವಿರುವುದು ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಮಾಜದ ಮುಖಂಡ ಮಂಜುನಾಥ ಮಕ್ಕಳಗೇರಿ, ಈ ಹೀನ ಕೃತ್ಯದ ಕುರಿತು ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದರು.ಶಾಂತಿ, ಸೌಹಾರ್ದತೆಯಿಂದ ಇರುವ ಗ್ರಾಮದಲ್ಲಿ ಇಂತಹ ದುಷ್ಕೃತ್ಯ ನಡೆಸಿರುವುದು ಅತ್ಯಂತ ಖಂಡನೀಯ. ದೇವರ ವಿಗ್ರಹ ಧ್ವಂಸ ಮಾಡಿ ಸಮಾಜದ ಶಾಂತಿ ಕದಡಲು ಯತ್ನಿಸಿರುವ ವಿಕೃತ ಮನಸ್ಸುಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಕೃತ್ಯ ನಡೆದ ಸ್ಥಳದಲ್ಲೇ ಕುಳಿತು ಮಕ್ಕಳಗೇರಿ ಗ್ರಾಮಸ್ಥರೊಂದಿಗೆ ಧರಣಿ ನಡೆಸಿದರು. ಪ್ರಮುಖರಾದ ರಾಜೇಶ್ವರಿ ಸಾಲಗಟ್ಟಿ, ಗುರು ಕರಡೆಣ್ಣವರ, ಶಿವಕುಮಾರ ಕಸಳ್ಳಿ ಹಾಗೂ ಗ್ರಾಮಸ್ಥರು ಇದ್ದರು.
ಘಟನೆ ನಡೆಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಗ್ರಾಮೀಣ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದುಷ್ಕೃತ್ಯ ನಡೆಸಿದವರ ಹುಡುಕಾಟ ನಡೆದಿದ್ದು, ಶೀಘ್ರ ಬಂಧಿಸುವುದಾಗಿಯೂ ಗ್ರಾಮಸ್ಥರಿಗೆ ಭರವಸೆ ನೀಡಿದರು.