ಕೊಪ್ಪಳ: ತಾಲೂಕಿನ ಮಳ್ಳಿಕೇರಿ ಗ್ರಾಮದ ಸರ್ಕಾರಿ ಶಾಲೆಯನ್ನು ಹ್ಯಾಟಿ ಕೆಪಿಎಸ್ ಶಾಲೆಗೆ ಸೇರ್ಪಡೆಗೆ ವಿರೋಧಿಸಿ ಗ್ರಾಮದ ಶಾಲೆಯ ಎದುರು ಎಐಡಿಎಸ್‌ಒ ನೇತೃತ್ವದಲ್ಲಿ ಪೋಷಕರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಐಡಿಎಸ್‌ಒ ರಾಜ್ಯ ನಾಯಕಿ ಸಿಂಧು ಕೌದಿ, ನಮ್ಮ ಕೊಪ್ಪಳದ ಅನೇಕ ಗ್ರಾಮೀಣ ಪ್ರದೇಶದಲ್ಲಿ ಇರುವುದು ಎಲ್ಲ ದುಡಿದು ಬದುಕುವ ಬಡವರು, ಕಾರ್ಮಿಕರು, ರೈತರು ಹಾಗೂ ಮಧ್ಯಮ ವರ್ಗದ ಜನರು ಈ ಭಾಗದ ಮಕ್ಕಳಿಗೆ ಶಿಕ್ಷಣ ಕೊಡುಸುವುದೇ ಕಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಶಾಲಾ, ಕಾಲೇಜು ಮತ್ತು ವಸತಿ ಶಾಲೆಗಳಲ್ಲಿ ಓದುವ ನಮ್ಮ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂಗಿರುವಾಗ ಪಕ್ಕದ 5 ಕಿಲೋಮೀಟರ್ ದೂರದಲ್ಲಿರುವ ಹ್ಯಾಟಿ ಶಾಲೆಗೆ ಮಳ್ಳಿಕೇರಿ ಶಾಲೆಯ ಮಕ್ಕಳನ್ನು ಹೇಗೆ ಕಳಿಸಲು ಸಾಧ್ಯ? ಸರ್ಕಾರಿ ಶಾಲೆ ಮುಚ್ಚಿದರೆ, ನಮ್ಮ ಮಕ್ಕಳು ಕಲಿಯೋಕೆ ಆಗುವುದಿಲ್ಲ. ಶಾಲೆಗಳನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 6-7 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಬಡವರ ಮಕ್ಕಳೆ ಹೆಚ್ಚು ಸಂಖ್ಯೆಯಲ್ಲಿ ದಾಖಲಾತಿ ಇರುವ ಮಳ್ಳಿಕೇರಿ ಸರ್ಕಾರಿ ಶಾಲೆ ಮುಚ್ಚುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈಗಾಗಲೇ ಕೊಪ್ಪಳ ಶಾಸಕರು ಹ್ಯಾಟಿ, ಗಿಣಿಗೇರ ಕೆಪಿಎಸ್ ಶಾಲೆಗಳ ಕಾಮಗಾರಿಗೆ ಅಧಿಕೃತವಾಗಿ ಬಹಳ ವೇಗವಾಗಿ ಚಾಲನೆ ನೀಡುತ್ತಿದ್ದಾರೆ. ಆ ಕೆಪಿಎಸ್ ಶಾಲೆಗಳಿಗೆ ಸುತ್ತಲಿನ 5ರಿಂದ 15 ಕಿಲೋಮೀಟರ್ ವ್ಯಾಪ್ತಿಯ ಶಾಲೆಗಳನ್ನು ಮುಚ್ಚುವತ್ತ ಸಾಗುತ್ತಿದ್ದಾರೆ. ಕೊಪ್ಪಳದ ಜನತೆ ಇಂತಹ ಬಡವರ ವಿರೋಧಿ, ಜನ ವಿರೋಧಿ ಯೋಜನೆಯನ್ನು ಪ್ರಶ್ನಿಸಿ ಬೃಹತ್ ಪ್ರತಿರೋಧ ಚಳವಳಿ ಬೆಳೆಸುವ ಮೂಲಕ ಶಾಲೆಗಳನ್ನು ರಕ್ಷಿಸಲು ಮುಂದಾಗಬೇಕು ಎಂದರು.ಪ್ರತಿಭಟನೆಯಲ್ಲಿ ಗ್ರಾಮದ ಮಹಿಳೆಯರು ಮಾತನಾಡಿ, ನಮ್ಮ ಊರಿನಲ್ಲಿ ಒಂದೇ ಒಂದು ಮಗು ಶಾಲೆಗೆ ಬಂದರೂ ಇಲ್ಲಿಯೇ ಶಿಕ್ಷಣ ಕೊಡಬೇಕು. ಬೇರೆ ಕಡೆ ನಮ್ಮ ಮಕ್ಕಳನ್ನು ಕಳುಹಿಸಿ ಓದಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ನಮ್ಮೂರ ಶಾಲೆ ಮುಚ್ಚೋಕೆ ನಾವು ಬಿಡುವುದಿಲ್ಲ, ಹೋರಾಡುತ್ತೇವೆ ಎಂದರು. ಗ್ರಾಮದ ಹಿರಿಯರು, ಯುವಕರು ಮತ್ತು ಪೋಷಕರು ಮಾತನಾಡಿದರು.