ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿದರೆ ಮಾತ್ರ ಬೆಳೆಯಲು ಸಾಧ್ಯ: ವಿದ್ಯಾಧೀಶ ತೀರ್ಥ ಸ್ವಾಮೀಜಿ

KannadaprabhaNewsNetwork |  
Published : Feb 27, 2026, 02:30 AM IST
ಶಿರಾಲಿಯ ಚಿತ್ರಾಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಮಾರುತಿ ಪತ್ತಿನ ಸಹಕಾರಿ ಸಂಘದ ಕಟ್ಟಡವನ್ನು ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಲೋಕಾರ್ಪಣಗೊಳಿಸಿದರು. | Kannada Prabha

ಸಾರಾಂಶ

ಶಿರಾಲಿಯ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದವರು ಚಿತ್ರಾಪುರ ರಸ್ತೆಯಲ್ಲಿ ನಿರ್ಮಿಸಿದ ನೂತನ ಕಟ್ಟಡವನ್ನು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಉದ್ಘಾಟಿಸಿದರು.

ಶಿರಾಲಿಯ ಮಾರುತಿ ಪತ್ತಿನ ಸಹಕಾರಿ ಸಂಘದ ನೂತನ ಸ್ವಂತ ಕಟ್ಟಡ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಭಟ್ಕಳ

ಶಿರಾಲಿಯ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದವರು ಚಿತ್ರಾಪುರ ರಸ್ತೆಯಲ್ಲಿ ನಿರ್ಮಿಸಿದ ನೂತನ ಕಟ್ಟಡವನ್ನು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಉದ್ಘಾಟಿಸಿದರು.

ನಂತರ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಯಾವುದೇ ಹಣಕಾಸು ಸಂಸ್ಥೆ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿದರೆ ಮಾತ್ರ ಉತ್ತಮವಾಗಿ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಮಾರುತಿ ಪತ್ತಿನ ಸಹಕಾರಿ ಸಂಘ ಉತ್ತಮವಾಗಿ ಬೆಳೆದು ಜನರ ಪ್ರೀತಿ, ವಿಶ್ವಾಸ ಗಳಿಸಿದ ಸಂಸ್ಥೆಯಾಗಿದೆ. ಈ ಸಂಸ್ಥೆ ಯಾವ ಮಟ್ಟಕ್ಕೆ ಬೆಳೆದಿದೆ ಎನ್ನುವುದಕ್ಕೆ ಸುಸಜ್ಜಿತವಾಗಿ ನಿರ್ಮಿಸಿದ ಸಂಸ್ಥೆಯ ಸ್ವಂತ ಕಟ್ಟಡವೇ ಸಾಕ್ಷಿಯಾಗಿದೆ. ಹಣಕಾಸು ಸಂಸ್ಥೆ ವಿಶ್ವಾಸ ಗಳಿಸಿದರೆ, ಸುಭದ್ರವಾಗಿದ್ದರೆ ಮಾತ್ರ ಠೇವಣಿದಾರರು ಬರುತ್ತಾರೆ. ಉತ್ತಮ ವ್ಯವಹಾರವೂ ಆಗುತ್ತದೆ ಎಂದ ಅವರು, ಶ್ರೀ ಮಾರುತಿ ಪತ್ತಿನ ಸಹಕಾರಿ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳು ಶ್ರೀಗಳಿಂದಲೇ ಉದ್ಘಾಟನೆಯಾಗಿದೆ. ಈ ನೂತನ ಕಟ್ಟಡದ ಶಿಲಾನ್ಯಾಸವನ್ನು ನಾವು ನೆರವೇರಿಸಿದ್ದು ಉದ್ಘಾಟನೆಯನ್ನು ಕೂಡಾ ನಾವೇ ಮಾಡಿದ್ದು ಸಂತಸ ತಂದಿದೆ. ನಮ್ಮ ಶ್ರೀ ಮಠದ ಆರಾಧ್ಯ ದೇವ ಹನುಮಂತನಾಗಿದ್ದಾನೆ, ಇಲ್ಲಿಯೂ ಕೂಡಾ ಹನುಮಂತ ಚಿಹ್ನೆಯೇ ಸಂಘದ ಚಿಹ್ನೆಯಾಗಿದೆ ಇದರಿಂದಾಗಿ ಮಠಕ್ಕೂ ಸಂಘಕ್ಕೂ ಅವಿನಾಭಾವ ಸಂಬಂಧ ಹೊಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಶೋಕ ಪೈ ಮಾತನಾಡಿ, ಸಂಘವು ನಡೆದು ಬಂದ ದಾರಿಯನ್ನು ವಿವರಿಸಿದರು. ಸಂಘದ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು, ಆಡಳಿತ ಮಂಡಳಿಯವರು ಹಾಗೂ ಶೇರುದಾರ ಸದಸ್ಯರು ಈ ಎಲ್ಲಾ ಸಾಧನೆಗೆ ಕಾರಣರಾಗಿದ್ದಾರೆ ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಅನೇಕ ಸಹಕಾರಿ ಸಂಘಗಳು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಶ್ರೀ ಮಾರುತಿ ಪತ್ತಿನ ಸಹಕಾರಿ ಸಂಘವೂ ಒಂದು ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಒಂದು ಸಂಸ್ಥೆ ಇಪ್ಪತ್ತೈದು ವರ್ಷ ಪೂರೈಸಿ ಜಿಲ್ಲೆಯಲ್ಲಿಯೇ ಒಂದು ಉತ್ತಮ ಸ್ವಂತ ಕಟ್ಟಡವನ್ನು ಹೊಂದಿದ್ದು ಸಂತಸದ ವಿಷಯವಾಗಿದೆ. ನಮ್ಮ ಜಿಲ್ಲೆಯಲ್ಲಿ ನೂರು ವರ್ಷ ಪೂರೈಸಿದ ಸಹಕಾರಿ ಸಂಸ್ಥೆಗಳು ಇವೆ. ಆದರೆ ೨೫ ವರ್ಷಗಳಿಂದ ಚುನಾವಣೆಯೇ ಇಲ್ಲದೆ ಸಂಘ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದರು. ಮಾಜಿ ಶಾಸಕ ಸುನಿಲ್ ನಾಯ್ಕ, ಲೆಕ್ಕ ಪರಿಶೋಧಕ ಎಂ.ಎಸ್. ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಪಂ ಆಡಳಿತಾಧಿಕಾರಿ ರಾಘವೇಂದ್ರ ನಾಯ್ಕ, ಸಂಘದ ಉಪಾಧ್ಯಕ್ಷ ಉಮೇಶ ಕಾಮತ್, ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಮಾಜಿ ನಿರ್ದೇಶಕರು, ಹಿರಿಯ ನಿರ್ದೇಶಕರು, ಹಿರಿಯ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಅಶೋಕ ಪೈ ಹಾಗೂ ಉಪಾಧ್ಯಕ್ಷ ಉಮೇಶ ಕಾಮತ್ ಶ್ರೀಗಳ ಪಾದುಕಾ ಪೂಜೆ ನೆರವೇರಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶಾನಭಾಗ ವರದಿ ವಾಚಿಸಿದರು. ನಿರ್ದೇಶಕ ನರೇಂದ್ರ ನಾಯಕ ಸ್ವಾಗತಿಸಿದರು. ಸಂಘದ ವ್ಯವಸ್ಥಾಪಕ ಪ್ರಸನ್ನ ಪ್ರಭು ನಿರೂಪಿಸಿದರು. ನಿರ್ದೇಶಕ ರವೀಂದ್ರ ಪ್ರಭು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ದಾರಿಯಲ್ಲಿ ನಡೆದರೆ ಮಾತ್ರ ಸುಖಿ ಜೀವನ: ದೊಡ್ಡನಗೌಡ ಪಾಟೀಲ
ಪೊಲೀಸರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ