ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಟ್ಟು 20 ದಿನ ಕಳೆದರೂ ಕೊನೆ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರಿಗೆ ಬೆಂಬಲಿಸಿ ಬುಧವಾರ ನಡೆದ ಸಿರವಾರ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಕನ್ನಡಪ್ರಭ ವಾರ್ತೆ ಸಿರವಾರ
ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಟ್ಟು 20 ದಿನ ಕಳೆದರೂ ಕೊನೆ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರಿಗೆ ಬೆಂಬಲಿಸಿ ಬುಧವಾರ ನಡೆದ ಸಿರವಾರ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಮಂಗಳವಾರದಿಂದ ರೈತರು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿಗೆ ಎರಡನೇ ದಿನ ಸಂಜೆ ತಿರುವು ಸಿಕ್ಕಿದ್ದು, ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಅವರು ರೈತ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಗುರುವಾರ ಕಲಬುರಗಿ ಕಚೇರಿಯಲ್ಲಿ ಭೇಟಿ ಮಾಡಲು ಅವಕಾಶ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ರೈತರು ಬುಧವಾರ ಸಂಜೆ ಧರಣಿಯನ್ನು ಹಿಂಪಡೆದರು.
ಬಂದ್ ಯಶಸ್ವಿ: ರೈತರ ಹೋರಾಟಕ್ಕೆ ಪಟ್ಟಣದ ವರ್ತಕರು ಬೆಂಬಲ ಸೂಚಿಸಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಿ ಸಹಕರಿಸಿದರು.
ಬಂದ್ ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರಿಂದ ಆಕ್ರೋಶಗೊಂಡ ರೈತರು ಮತ್ತೆ ರಸ್ತೆಗಿಳಿದು ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.
47ನೇ ಮೈಲಿಯಲ್ಲಿ 1ಅಡಿ ಕಡಿಮೆ, 104ನೇ ಮೈಲಿಗೆ ನೀರಿಲ್ಲ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ‘ತುಂಗಭದ್ರಾ ಎಡದಂಡೆ ಕಾಲುವೆಯ 47ನೇ ಮೈಲಿಯಲ್ಲಿ ನೀರಿನಮಟ್ಟ ಒಂದು ಅಡಿ ಕಡಿಮೆ ಮಾಡಲಾಗಿದೆ. ಆದರೆ ಅದೇ ನೀರನ್ನು 104ನೇ ಮೈಲಿಯವರೆಗಿನ ಕೆಳಭಾಗದ ರೈತರಿಗೆ ಹರಿಸುತ್ತಿಲ್ಲ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ನೀರು ನಿರ್ವಹಣೆಯಲ್ಲಿ ಉದ್ದೇಶಪೂರ್ವಕವಾಗಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹೋರಾಟದಲ್ಲಿ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ರಾಜಾವೆಂಕಟಪ್ಪ ನಾಯಕ, ಗಂಗಾಧರ ನಾಯಕ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಬಿಳಗಭಾವಿ,ಮುಖಂಡರಾದ ಶರಣಪ್ಪಗೌಡ, ಜೆ.ಶಂಕರರೆಡ್ಡಿ, ಜೆ.ದೇವರಾಜಗೌಡ, ಎನ್.ಉದಯಕುಮಾರ, ಎಂ.ನಾಗರಾಜಗೌಡ, ರಾಜಾ ಆದರ್ಶ ನಾಯಕ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಅಹಿತಕರ ಘಟನೆ ನಡೆಯದಂತೆ ತಹಶೀಲ್ದಾರ್ ಅಶೋಕ ಪವಾರ್, ಸಿರವಾರ ಪಿಎಸ್ಐ ಚಂದ್ರಶೇಖರ ನಾಯಕ, ಸಿಪಿಐ ಬಿ.ಶರಣಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.