ಶಿವಪುರ ಧ್ವಜ ಸತ್ಯಾಗ್ರಹ ಸೌಧದ ನಿಜವಾದ ನಾಯಕ ಪಿ.ತಿರುಮಲೇಗೌಡ

KannadaprabhaNewsNetwork |  
Published : Jul 21, 2026, 01:30 AM IST
20ಕೆಎಂಎನ್‌ಡಿ-4ಪಿ.ತಿರುಮಲೇಗೌಡ | Kannada Prabha

ಸಾರಾಂಶ

ಶಿವಪುರ ಧ್ವಜ ಸತ್ಯಾಗ್ರಹ ಸೌಧ ಹೆಸರು ಕೇಳಿದರೆ ಸಾಕು ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಅಧ್ಯಾಯ ನೆನಪಾಗುತ್ತದೆ. ಆದರೆ, ಆ ಐತಿಹಾಸಿಕ ಧ್ವಜ ಸತ್ಯಾಗ್ರಹದ ಯಶಸ್ಸಿನ ಹಿಂದಿದ್ದ ಮಹಾನ್ ದೇಶಭಕ್ತನ ಹೆಸರು ಮಾತ್ರ ಜನಮಾನಸದಿಂದ ಮರೆತೇ ಹೋಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಡ್ಯ

ಶಿವಪುರ ಧ್ವಜ ಸತ್ಯಾಗ್ರಹ ಸೌಧ ಹೆಸರು ಕೇಳಿದರೆ ಸಾಕು ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಅಧ್ಯಾಯ ನೆನಪಾಗುತ್ತದೆ. ಆದರೆ, ಆ ಐತಿಹಾಸಿಕ ಧ್ವಜ ಸತ್ಯಾಗ್ರಹದ ಯಶಸ್ಸಿನ ಹಿಂದಿದ್ದ ಮಹಾನ್ ದೇಶಭಕ್ತನ ಹೆಸರು ಮಾತ್ರ ಜನಮಾನಸದಿಂದ ಮರೆತೇ ಹೋಗಿದೆ. ತಮ್ಮ ಜಮೀನು, ಮನೆ, ಸಂಪತ್ತು, ಬದುಕನ್ನೇ ದೇಶಕ್ಕಾಗಿ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರನಿಗೆ ಇತಿಹಾಸದಲ್ಲಿ ಸಿಗಬೇಕಾದ ಸ್ಥಾನ ಸಿಗಲೇ ಇಲ್ಲ. ಮರೆತು ಹೋದ ಮಹಾನ್ ದೇಶಭಕ್ತನ ಹೆಸರು ಪಿ.ತಿರುಮಲೇಗೌಡ.

ಶಿವಪುರ ಧ್ವಜ ಸತ್ಯಾಗ್ರಹದ ಹಿಂದಿನ ನಿಜವಾದ ನಾಯಕರೇ ಪಿ.ತಿರುಮಲೇಗೌಡರು. ದೇಶಕ್ಕಾಗಿ ಬದುಕನ್ನೇ ತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ. ರಾಜಕೀಯದಲ್ಲಿ ಪ್ರಾಮಾಣಿಕತೆಗೆ ಮಾದರಿಯಾದ ಅಪರೂಪದ ನಾಯಕ. ಅಂತಹ ಮುತ್ಸದ್ಧಿಯ ಹೆಸರನ್ನು ಶಾಶ್ವತವಾಗಿಡುವ ಕೆಲಸ ತುರ್ತಾಗಿ ಆಗಬೇಕಿದೆ.

೧೯೩೮ ಬ್ರಿಟಿಷರ ಆಳ್ವಿಕೆಯ ವಿರುದ್ಧ ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹೊತ್ತಿದ್ದ ಕಾಲ. ಕರ್ನಾಟಕದಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಕಲ್ಪಿಸಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶಿವಪುರ ಗ್ರಾಮ. ಅಲ್ಲಿ ನಡೆದ ಐತಿಹಾಸಿಕ ಧ್ವಜ ಸತ್ಯಾಗ್ರಹದ ಹಿಂದೆ ನಿಂತಿದ್ದ ಪ್ರಮುಖ ಶಕ್ತಿ ಪಿ.ತಿರುಮಲೇಗೌಡರು.

ಅಬಕಾರಿ ಗುತ್ತಿಗೆದಾರರಾಗಿ, ಶಿವಪುರದ ಜಮೀನ್ದಾರರಾಗಿದ್ದ ತಿರುಮಲೇಗೌಡರು ಸತ್ಯಾಗ್ರಹ ಸೌಧಕ್ಕೆ ಕೇವಲ ತಮ್ಮ ಜಮೀನನ್ನು ಮಾತ್ರ ನೀಡಲಿಲ್ಲ. ಸತ್ಯಾಗ್ರಹದ ಸ್ವಾಗತ ಸಮಿತಿ ಕಚೇರಿ ಹಾಗೂ ಹೋರಾಟಗಾರರ ವಾಸಕ್ಕಾಗಿ ತಮ್ಮ ಸ್ವಂತ ಮನೆಯನ್ನೇ ಬಿಟ್ಟುಕೊಟ್ಟರು. ಅಷ್ಟೇ ಅಲ್ಲ, ಸತ್ಯಾಗ್ರಹ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯ ಹೊಣೆ ಹೊತ್ತು ಆರ್ಥಿಕ ನೆರವು ನೀಡಿ ಹೋರಾಟವನ್ನು ಯಶಸ್ವಿಗೊಳಿಸಿದರು.

ಆದರೆ, ತಿರುಮಲೇಗೌಡರ ಈ ನಿರ್ಧಾರ ಬ್ರಿಟಿಷ್ ಸರ್ಕಾರಕ್ಕೂ, ಮೈಸೂರು ಸಂಸ್ಥಾನದ ಆಡಳಿತಕ್ಕೂ ಬಹುದೊಡ್ಡ ಸವಾಲಾಗಿ ಪರಿಣಮಿಸಿತು. ನೋಟಿಸ್ ಮೇಲೆ ನೋಟಿಸ್. ಬಂಧನ ಬೆದರಿಕೆ. ಆಡಳಿತದ ಒತ್ತಡ. ಯಾವುದಕ್ಕೂ ತಲೆಬಾಗದೆ ಧ್ವಜ ಸತ್ಯಾಗ್ರಹ ನನ್ನ ನೆಲದಲ್ಲೇ ನಡೆಯಬೇಕು ಎಂಬ ದೃಢ ಸಂಕಲ್ಪದೊಂದಿಗೆ ಮುಂಚೂಣಿಯಲ್ಲಿ ನಿಂತರು.

ಧ್ವಜ ಸತ್ಯಾಗ್ರಹ ಯಶಸ್ವಿಯಾದ ನಂತರ ಆರಂಭವಾಯಿತು ನಿಜವಾದ ಹೋರಾಟ. ಅಬಕಾರಿ ಗುತ್ತಿಗೆ ರದ್ದು. ಠೇವಣಿ ಹಣ ಮುಟ್ಟುಗೋಲು. ವ್ಯಾಪಾರಕ್ಕೆ ಅಡ್ಡಿ. ಆರ್ಥಿಕ ಸಂಕಷ್ಟ. ಜೈಲು ಶಿಕ್ಷೆ. ಹೀಗೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾದರೂ ದೇಶಪ್ರೇಮದ ದಾರಿಯಿಂದ ತಿರುಮಲೇಗೌಡರು ಹಿಂದೆ ಸರಿಯಲೇ ಇಲ್ಲ.

ಸ್ವಾತಂತ್ರ್ಯ ಬಂದ ಬಳಿಕವೂ ದೇಶಸೇವೆಯನ್ನು ಮುಂದುವರಿಸಿದ ತಿರುಮಲೇಗೌಡರು, ಶಿವಪುರ ಸತ್ಯಾಗ್ರಹ ಸೌಧ ನಿರ್ಮಾಣಕ್ಕಾಗಿ ಐದು ಎಕರೆ ಜಮೀನನ್ನು ದಾನವಾಗಿ ನೀಡಿದರು. ಅವರ ಸೇವೆ ಗುರುತಿಸಿದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಪಿ.ತಿರುಮಲೇಗೌಡರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದರು. ಸಚಿವರಾಗುವ ಅವಕಾಶ ಬಂದರೂ ನಾನು ಅವಿದ್ಯಾವಂತ ಎಂದು ಹೇಳಿ ಆ ಸ್ಥಾನವನ್ನು ತಾವೇ ತಿರಸ್ಕರಿಸಿದ್ದು ಅವರ ಸರಳತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲೂ ತಿರುಮಲೇಗೌಡರ ಹೆಸರು ವಿಶೇಷವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ರಾಜಕೀಯಕ್ಕೆ ಕರೆತಂದವರೂ ಇದೇ ತಿರುಮಲೇಗೌಡರು ಎಂಬುದು ಇತಿಹಾಸದ ಮತ್ತೊಂದು ಕುತೂಹಲಕಾರಿ ಅಧ್ಯಾಯ.

ಸ್ವಾತಂತ್ರ್ಯ ಹೋರಾಟಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದ ವ್ಯಕ್ತಿ ಪಿ.ತಿರುಮಲೇಗೌಡರ ಹೆಸರನ್ನು ಶಾಶ್ವತವಾಗಿ ಉಳಿಸುವ ಕಾರ್ಯ ಈವರೆಗೂ ನಡೆಯಲೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರನ ನಿಷ್ಠೆ, ಪ್ರಾಮಾಣಿಕತೆಯನ್ನು ಸಮಾಜ ನಿರ್ಲಕ್ಷಿಸಿರುವ ಆರೋಪ ಕೇಳಿಬರುತ್ತಿದೆ. ಶಿವಪುರ ಸತ್ಯಾಗ್ರಹ ಸೌಧದಲ್ಲಿ ಅವರ ಹೆಸರಿಲ್ಲ. ಕನಿಷ್ಠ ಅವರ ಭಾವಚಿತ್ರವೂ ಇಲ್ಲ. ಮದ್ದೂರು ಅಥವಾ ಶಿವಪುರದಲ್ಲಿ ಅವರ ಹೆಸರಿನ ರಸ್ತೆ, ವೃತ್ತ ಇಲ್ಲ. ಸರ್ಕಾರದ ಅಧಿಕೃತ ಸ್ಮಾರಕಗಳಲ್ಲೂ ಅವರಿಗೆ ಸ್ಥಾನ-ಮಾನ ನೀಡಿಲ್ಲ. ಅವರ ಕುಟುಂಬವೂ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಮಾತುಗಳು ಕೇಳಿ ಬರ್ತಿವೆ.

ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಜ್ಯೋತಿ ಬೆಳಗಿಸಿದ ಮಹಾನ್ ದೇಶಭಕ್ತ ಪಿ.ತಿರುಮಲೇಗೌಡರ ಸೇವೆ ಅಜರಾಮರವಾಗಿದೆ. ಇತಿಹಾಸದಲ್ಲಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಆದರೆ, ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಈಗಲಾದರೂ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದಲ್ಲಿ ಮೊಟ್ಟ ಮೊದಲು ಸ್ವಾತಂತ್ರ್ಯ ಹೋರಾಟದ ರಣಕಹಳೆ ಮೊಳಗಿಸಿದ್ದೇ ಪಿ.ತಿರುಮಲೇಗೌಡರು. ಸತ್ಯಾಗ್ರಹ ಸೌಧಕ್ಕಾಗಿ ಜಮೀನನ್ನು ದಾನವಾಗಿ ನೀಡಿದ ಉದಾರಿ. ಅಂತಹ ವ್ಯಕ್ತಿಗಳ ಹೆಸರನ್ನು ಜನಮಾನಸದಲ್ಲಿ ಶಾಶ್ವತವಾಗಿ ಇರಿಸಬೇಕಿರುವುದು ಸರ್ಕಾರಗಳ ಕರ್ತವ್ಯ. ಸತ್ಯಾಗ್ರಹ ಸೌಧದಲ್ಲಿ ಅವರದ್ದೊಂದು ಭಾವಚಿತ್ರವಿಲ್ಲ. ಶಿವಪುರ ಅಥವಾ ಮದ್ದೂರಿನ ಯಾವೊಂದು ರಸ್ತೆ, ವೃತ್ತ, ಬಡಾವಣೆಗೆ ಅವರ ಹೆಸರಿಲ್ಲ. ಪಠ್ಯದಲ್ಲಿ ಅವರ ಪರಿಚಯವಿಲ್ಲ. ಹೀಗಾದರೆ ಅವರ ಜೀವನಚರಿತ್ರೆ, ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಇಂದಿನ ತಲೆಮಾರಿನವರಿಗೆ ತಿಳಿಸುವುದಾದರೂ ಹೇಗೆ?

- ತೈಲೂರು ವೆಂಕಟಕೃಷ್ಣ, ಇತಿಹಾಸ ತಜ್ಞರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ: ಶಾಸಕ ಗಣೇಶ್ ಸಲಹೆ
28ರಂದು ನಗರದಲ್ಲಿ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ