ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ಆಡಿಟೋರಿಯಂನಲ್ಲಿ ಕನ್ನಡಪ್ರಭ- ಸುವರ್ಣನ್ಯೂಸ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಲೆ ಎಲ್ಲರನ್ನೂ ಅಪ್ಪಿಕೊಳ್ಳುವುದಿಲ್ಲ. ಒಲಿಸಿಕೊಂಡವರನ್ನು ಎಂದಿಗೂ ಕೈಬಿಡುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯನ್ನು ಆಸಕ್ತಿಯಿಂದ ಕಲಿಯಬೇಕು. ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆಯತ್ತ ಹೆಜ್ಜೆ ಇಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ಪರ್ಧೆ ಎಂದ ಮೇಲೆ ಸೋಲು- ಗೆಲುವು ಸಾಮಾನ್ಯ. ಸೋಲಿಗೆ ಅಂಜಬಾರದು. ಸೋಲುಂಟಾಗುವುದಕ್ಕೆ ಮಾಡಿರಬಹುದಾದ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನತ್ತ ಮುನ್ನಡೆಯಬೇಕು. ಒಂದು ಸೋಲು ಮುಂದಿನ ಗೆಲುವಿಗೆ ಪಾಠವಾಗಬೇಕು. ಶ್ರದ್ಧೆ, ಆಸಕ್ತಿ, ವಿಭಿನ್ನ ಆಲೋಚನೆ, ವಿಶಿಷ್ಟ ಕಲ್ಪನಾ ಶಕ್ತಿಯನ್ನು ಬೆಳೆಸಿಕೊಂಡು ಚಿತ್ರಕಲೆಯಲ್ಲಿ ತೊಡಗಿದಾಗ ಪರಿಪೂರ್ಣ ಚಿತ್ರಕಲಾವಿದನಾಗಿ ಹೊರಹೊಮ್ಮುವುದಕ್ಕೆ ಸಾಧ್ಯವಾಗಲಿದೆ ಎಂದು ನುಡಿದರು.ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಚಾತುರ್ಯ ಶಿಕ್ಷಕರು- ಪೋಷರಲ್ಲಿ ಇರಬೇಕು. ಅವರಿಗೆ ಉತ್ತಮ ಪ್ರೋತ್ಸಾಹ, ಮಾರ್ಗದರ್ಶನ ಮಾಡುತ್ತಿರಬೇಕು. ಒಳ್ಳೆಯ ಅವಕಾಶಗಳು ಸಿಕ್ಕಾಗ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವು ಮಾತನಾಡಿ, ಮಕ್ಕಳು ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳೂ ನೀಡಬೇಕು. ಇದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಉತ್ತಮ ಆಲೋಚನೆಗಳು ಮೂಡಲು ಸಾಧ್ಯವಾಗುತ್ತದೆ. ಚಿತ್ರಕಲೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಮುನ್ನಡೆದಾಗ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಹೇಳಿದರು.
ಕನ್ನಡಪ್ರಭ ವಿಶೇಷ ಯೋಜನೆಗಳ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಚಿತ್ರಕಲಾ ಸ್ಪರ್ಧೆಯನ್ನು ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಆಯೋಜಿಸಲಾಗುತ್ತಿದೆ. ಇದರ ಹಿಂದೆ ಯಾವುದೇ ಸ್ವಾರ್ಥದ ಉದ್ದೇಶವಿಲ್ಲ. ಮಕ್ಕಳ ಮನಸ್ಸು ಕ್ರಿಯಾಶೀಲವಾಗಿ ಬೆಳವಣಿಗೆ ಸಾಧಿಸಬೇಕು ಎಂದು ನುಡಿದರು.
ಮಳವಳ್ಳಿ ತಾಲೂಕು ಹಲಗೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಸುರೇಂದ್ರ, ಕಾರ್ಮೆಲ್ ಕಾನ್ವೆಂಟ್ ಶಾಲೆಯ ಗಣಿತ ಶಿಕ್ಷಕ ಸಂಗೀತರಾಜ್, ಚಿತ್ರಕಲಾ ಶಿಕ್ಷಕ ಪ್ರಶಾಂತ್ ಇದ್ದರು.
ಚಿತ್ರಕಲೆ ಸ್ಪರ್ಧೆ ವಿಜೇತರು
ಪ್ರಥಮ ಬಹುಮಾನ ೧೦ ಸಾವಿರ ರು., ದ್ವಿತೀಯ ಬಹುಮಾನ ೭ ಸಾವಿರ ರು., ತೃತೀಯ ಬಹುಮಾನ ೪ ಸಾವಿರ ರು., ಸಮಾಧಾನಕರ ಬಹುಮಾನ ತಲಾ ೨ ಸಾವಿರ ರು., ಪ್ರಶಸ್ತಿ ಫಲಕ, ಪ್ರಮಾಣಪತ್ರಗಳನ್ನು ನೀಡಲಾಯಿತು. ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಚೇತನ್, ಪ್ರಕಾಶ್ ಮತ್ತು ಸೋಮು ಭಾಗವಹಿಸಿದ್ದರು.