4 ವರ್ಷಗಳ ಹಿಂದೆಯೂ ಈ ಪ್ರದೇಶದಲ್ಲಿ ಮೊಸಳೆ ಕಂಡುಬಂದಿದ್ದು, ಬಳಿಕ ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಸ್ಥಳೀಯರ ಬಾವಿಯಲ್ಲಿ ಪತ್ತೆಯಾಗಿ, ಅರಣ್ಯ ಇಲಾಖೆ ಅದನ್ನು ರಕ್ಷಿಸಿ ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿತ್ತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಮುಂಭಾಗ ಹರಿಯುವ ನೇತ್ರಾವತಿ ನದಿ ಪರಿಸರದಲ್ಲಿ ಭಾನುವಾರ ಮೊಸಳೆ ಕಂಡು ಬಂದಿದೆ.ದೇವಸ್ಥಾನದ ಸಮೀಪ ಮೃತ್ಯುಂಜಯ ಹಾಗೂ ನೇತ್ರಾವತಿ ನದಿ ಸಂಗಮಗೊಳ್ಳುತ್ತದೆ. ಭಾನುವಾರ ಕೆಸರು ಮಿಶ್ರಿತ ನೀರಿನೊಂದಿಗೆ ಉತ್ತಮ ಹರಿವಿದ್ದ ನದಿಯಲ್ಲಿ ಬೆಳಗ್ಗೆ 10 ಗಂಟೆ ವೇಳೆಗೆ ಮೊಸಳೆ ಈಜಾಡುತ್ತಿರುವುದು ಕಂಡು ಬಂದಿದೆ. ಬಳಿಕ ಮೊಸಳೆ ನದಿಯ ಇನ್ನೊಂದು ಭಾಗದಲ್ಲಿ ಮರಳಿನ ಮೇಲೆ ವಿಶ್ರಮಿಸುತ್ತಿತ್ತು. ಮತ್ತೆ ನದಿಗೆ ಇಳಿದ ಮೊಸಳೆ ಸ್ವಲ್ಪ ಸಮಯದ ನಂತರ ಅದೇ ಸ್ಥಳದಲ್ಲಿ ಕಂಡುಬಂತು. ಸುಮಾರು ಒಂದು ತಾಸಿನಷ್ಟು ಸಮಯ ಅಲ್ಲೇ ಇದ್ದ ಮೊಸಳೆ ಕೊನೆಗೆ ನದಿಗೆ ಇಳಿದಿದೆ.ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊಸಳೆ ಕಂಡುಬಂದ ಸ್ಥಳಕ್ಕೆ ಹೋಗಲು ಹೆಚ್ಚಿನ ನೀರ ಹರಿವು ಹಾಗೂ ಸ್ಥಳದಲ್ಲಿ ಹೂಳು ತುಂಬಿರುವುದು ಅಡ್ಡಿ ನೀಡಿದೆ.ಕಳೆದ ಮೂರು-ನಾಲ್ಕು ದಿನಗಳಿಂದ ನೇತ್ರಾವತಿ, ಮೃತ್ಯುಂಜಯ ನದಿ ಪ್ರದೇಶದ ಅಲ್ಲಲ್ಲಿ ಮೊಸಳೆ ಕಂಡು ಬಂದಿರುವ ಕುರಿತು ಸ್ಥಳೀಯರು ಹೇಳುತ್ತಿದ್ದಾರೆ.4 ವರ್ಷಗಳ ಹಿಂದೆಯೂ ಈ ಪ್ರದೇಶದಲ್ಲಿ ಮೊಸಳೆ ಕಂಡುಬಂದಿದ್ದು, ಬಳಿಕ ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಸ್ಥಳೀಯರ ಬಾವಿಯಲ್ಲಿ ಪತ್ತೆಯಾಗಿ, ಅರಣ್ಯ ಇಲಾಖೆ ಅದನ್ನು ರಕ್ಷಿಸಿ ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿತ್ತು.ನೇತ್ರಾವತಿ, ಮೃತ್ಯುಂಜಯ ನದಿ ಪರಿಸರದಲ್ಲಿ ಆಗಾಗ ಮೊಸಳೆ ಕಂಡು ಬರುತ್ತಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ನದಿ ಬದಿ ತಿರುಗಾಡುವ ಜನರು, ಕೃಷಿಕರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.