ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಆಡಳಿತಾಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಷಯಗಳ ಕುರಿತು ಒಂದು ದಿನದ ತರಬೇತಿ ಕಾರ್ಯಗಾರಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಚಾಲನೆ ನೀಡಿದರು.
ಗ್ರಾಮೀಣ ಜನರ ಸೇವೆ ಮಾಡುವ ಸದಾವಕಾಶವನ್ನು ಪ್ರಾಮಾಣಿಕ ಹಾಗೂ ಜವಾಬ್ದಾರಿಯುತವಾಗಿ ಆಡಳಿತಾಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿರ್ವಹಿಸಬೇಕು. ಸರ್ಕಾರದ ಅನುದಾನದಿಂದ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಬೇಕು. ಸಮಸ್ಯೆ ಹೊತ್ತುಬರುವ ಜನರಿಗೆ ಶೀಘ್ರ ಸ್ಪಂದಿಸಿ, ಸ್ಪಂದನಾಶೀಲ ಆಡಳಿತ ನೀಡುವ ಕೆಲಸ ಮಾಡಬೇಕು ಎಂದರು.
ಪಂಚಾಯತ್ ರಾಜ್ ಕಾಯ್ದೆಗಳ ಬಗ್ಗೆ ತಿಳಿದುಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಪಂಚಾಯತ್ ಆಡಳಿತಾಧಿಕಾರಿಗಳು ಸಾಮಾನ್ಯ ಸಭೆ, ಮಕ್ಕಳ ಸಭೆ ಸೇರಿ ವಿಶೇಷ ಸಭೆಗಳು ಕಡ್ಡಾಯವಾಗಿ ನಡೆಸಿ, ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಬೇಕು. ಗ್ರಾಮ ಪಂಚಾಯಿತಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಕೈಗೊಂಡು ಜನರ ಸಮಸ್ಯೆ, ಅಹವಾಲುಗಳಿಗೆ ಸ್ಪಂದಿಸಿ, ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಜನಸಾಮನ್ಯರ ಅವಶ್ಯಕತೆಗೆ ತಕ್ಕಂತೆ ಶುದ್ಧ ಕುಡಿಯವ ನೀರು, ಸ್ವ ಉದ್ಯೋಗ ಸೃಷ್ಠಿ, ಆರ್ಥಿಕ, ಸಾಮಾಜಿಕ ಮಟ್ಟದಲ್ಲಿ ಅಭಿವೃದ್ಧಿ, ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಲು ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ಈ ವೇಳೆ ಜಿಪಂ ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ್ ಸೇರಿ ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರ್‌ಡಿಪಿಆರ್ ಇಲಾಖೆ ತರಬೇತಿ ಕಾರ್ಯಾಗಾರಕ್ಕೆ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಚಾಲನೆ ನೀಡಿದರು.