ಅಡುಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಹತ್ತಿಕ್ಕಲ್ಪಟ್ಟಿದ್ದ ಹೆಣ್ಣಿನ ದನಿ, ಇಂದು ಅಕ್ಷರ ರೂಪ ಪಡೆದುಕೊಂಡು ಜಗತ್ತಿನ ಗಮನ ಸೆಳೆಯುತ್ತಿದೆ. ಇದು ಕೇವಲ ಸಾಹಿತ್ಯವಲ್ಲ, ಇದೊಂದು ಸಾಮಾಜಿಕ ಚಳವಳಿ.
ಧಾರವಾಡ:
ಕನ್ನಡದ ಮಹಿಳಾ ಕಾದಂಬರಿ ಪ್ರಪಂಚವು ಕೇವಲ ಕೌಟುಂಬಿಕ ಚಿತ್ರಣಕ್ಕೆ ಸೀಮಿತವಾಗಿಲ್ಲ, ಅದು ಶತಮಾನಗಳಿಂದ ನಡೆದು ಬಂದ ಲಿಂಗ ಅಸಮಾನತೆಯನ್ನು ಪ್ರಶ್ನಿಸುವ ಶಕ್ತಿಯುತ ಅಸ್ತ್ರವಾಗಿದೆ ಎಂದು ಚಿಂತಕಿ ಡಾ. ಕೆ.ಆರ್. ಸಿದ್ಧಗಂಗಮ್ಮ ಅಭಿಪ್ರಾಯಪಟ್ಟರು.ನಗರದ ಕಸಾಪ ೧೮ನೇ ಜಿಲ್ಲಾ ಸಮ್ಮೇಳನದಲ್ಲಿ ಮಂಗಳವಾರ ಹೊರಳು ದಾರಿಯಲ್ಲಿ ಮಹಿಳಾ ಸಾಹಿತ್ಯ ಗೋಷ್ಠಿಯಲ್ಲಿ ''''ಮಹಿಳಾ ಕಾದಂಬರಿ: ಲಿಂಗ ಸಮಾನತೆ'''' ಕುರಿತು ಮಾತನಾಡಿದ ಅವರು, ಮಹಿಳಾ ಸಾಹಿತ್ಯ ಅಡುಗೆ ಮನೆ ಸಾಹಿತ್ಯ ಎಂಬುದು ಸರಿಯಲ್ಲ ಎಂದರು.
ಅಡುಗೆ ಮನೆಯಿಂದ ಅಕ್ಷರ ಲೋಕಕ್ಕೆ:ಅಡುಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಹತ್ತಿಕ್ಕಲ್ಪಟ್ಟಿದ್ದ ಹೆಣ್ಣಿನ ದನಿ, ಇಂದು ಅಕ್ಷರ ರೂಪ ಪಡೆದುಕೊಂಡು ಜಗತ್ತಿನ ಗಮನ ಸೆಳೆಯುತ್ತಿದೆ. ಇದು ಕೇವಲ ಸಾಹಿತ್ಯವಲ್ಲ, ಇದೊಂದು ಸಾಮಾಜಿಕ ಚಳವಳಿ ಎಂದು ಬಣ್ಣಿಸಿದರು.
ಇತಿಹಾಸ ಯಾವಾಗಲೂ ಪುರುಷ ಕೇಂದ್ರಿತವಾಗಿಯೇ ದಾಖಲಾಗಿದೆ. ಆದರೆ, ಮಹಿಳಾ ಕಾದಂಬರಿಕಾರರು ತಮ್ಮ ಕೃತಿಗಳ ಮೂಲಕ ಇತಿಹಾಸದ ಆ ಪುಟಗಳಲ್ಲಿ ಮರೆಯಾದ ಹೆಣ್ಣಿನ ಸಂಘರ್ಷ, ನೋವು ಹಾಗೂ ಅಸ್ಮಿತೆಯನ್ನು ಕೂಡ ದಾಖಲಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು. ಕಾದಂಬರಿಗಳಲ್ಲಿ ಲಿಂಗ ಅಸಮಾನತೆಯು ಕೇವಲ ದೈಹಿಕ ಶೋಷಣೆಯಾಗಿ ಚಿತ್ರಣ ಆಗಿಲ್ಲ. ಅದು ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ನೆಲೆಗಳಲ್ಲಿ ಹೇಗೆ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡಿದೆ ಎಂಬುದನ್ನು ಸಿದ್ಧಗಂಗಮ್ಮ ಎತ್ತಿ ತೋರಿಸಿದರು. ಲೇಖಕಿಯರ ಕೊಡುಗೆ: ತಿರುಮಲಾಂಬ ಅವರಿಂದ ಹಿಡಿದು ಇಂದಿನ ತಲೆಮಾರಿನ ಲೇಖಕಿಯರವರೆಗೆ, ಮಹಿಳಾ ಕಾದಂಬರಿಗಳು ಹೇಗೆ ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ಪ್ರಶ್ನಿಸುತ್ತಲೇ ಬಂದಿವೆ ಎಂಬುದನ್ನೂ ಕೂಡ ಉದಾಹರಣೆ ಸಹಿತ ವಿವರಿಸಿದರು. ಕಾವ್ಯ ಅಸ್ಮಿತೆಯ ಹುಡುಕಾಟ:''''ಮಹಿಳಾ ಕಾವ್ಯ: ಅಭಿವ್ಯಕ್ತಿಯ ಆವಿಷ್ಕಾರ'''' ವಿಷಯ ಮಂಡಿಸಿದ ಡಾ. ಶ್ರೀಧರ ಹೆಗಡೆ ಭದ್ರನ್, ಮಹಿಳಾ ಕಾವ್ಯ ಪದಗಳ ಜೋಡಣೆಯಲ್ಲ, ಅದು ಶತಮಾನಗಳ ಮೌನ ಮುರಿದು, ಹೊರಬಂದ ಅಸ್ಮಿತೆಯ ಹುಡುಕಾಟ ಮತ್ತು ಹೊಸ ಲೋಕದ ಆವಿಷ್ಕಾರ ಎಂದರು. ಮಹಿಳಾ ಕಾವ್ಯದಲ್ಲಿ ''''ದೇಹ'''' ಪ್ರತಿರೋಧದ ರೂಪಕವಾಗಿ ಬಳಸಲ್ಪಟ್ಟಿದೆ. ಶೃಂಗಾರಕ್ಕೆ ಸೀಮಿತವಾಗಿದ್ದ ಹೆಣ್ಣಿನ ಚಿತ್ರಣವನ್ನು ಮಹಿಳಾ ಕವಯಿತ್ರಿಯರು ಬದುಕಿನ ಸಂಘರ್ಷ, ರಾಜಕಾರಣ ಮತ್ತು ಸಾಮಾಜಿಕ ನ್ಯಾಯದ ನೆಲೆಗೆ ಕೊಂಡೊಯ್ದಿದ ಬಗ್ಗೆ ವಿವರವಾಗಿ ವಿಶ್ಲೇಷಿಸಿದರು. ಕವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಶಾಲಿನಿ ರಘುನಾಥ ಅಧ್ಯಕ್ಷತೆ ವಹಿಸಿದ್ದರು. ರಮೇಶ ಸೊಲ್ಲಾರಗೊಪ್ಪ, ಪ್ರಭುಲಿಂಗ ರಂಗಾಪೂರ, ವಿನಾಯಕ ಭಟ್, ಡಾ. ರವಿಕುಮಾರ, ಡಾ. ಲಿಂಗರಾಜ ಅಂಗಡಿ ಇದ್ದರು.