ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿ ಗ್ರಾಮದಲ್ಲಿ 1949ರ ಅಕ್ಟೋಬರ್ 17ರಂದು ತಂದೆ ಮರೀಗೌಡ, ತಾಯಿ ನಿಂಗಮ್ಮರ ಪುತ್ರನಾಗಿ ಬಡ ರೈತ ಕುಟುಂಬದಲ್ಲಿ ಜನಿಸಿದ ಅಂಕೇಗೌಡರು ಹರಳಹಳ್ಳಿ ಗ್ರಾಮದಲ್ಲಿ ‘ಪುಸ್ತಕ ಮನೆ’ ಆರಂಭಿಸಿದಾಗ ಎದುರಾದ ಕಷ್ಟಗಳು ಅಷ್ಟಿಷ್ಟಲ್ಲ. ತನ್ನ ನೌಕರಿಯನ್ನೇ ಪುಸ್ತಕಕ್ಕಾಗಿ ತ್ಯಾಗ ಮಾಡಿದ ಅಂಕೇಗೌಡರು ದಶಕಗಳ ಕಾಲ ಪುಸ್ತಕಗಳನ್ನು ಪ್ರೀತಿಸಿದ್ದಕ್ಕೆ ಇಂದು ‘ಪದ್ಮಶ್ರೀ’ ಲಭಿಸಿದೆ.
ಮೊದಲು ಸಣ್ಣ ಸಣ್ಣ ಪುಸ್ತಕಗಳ ಸಂಗ್ರಹ ಆರಂಭ:ಅಂಕೇಗೌಡರ ಪುಸ್ತಕ ಸಂಗ್ರಹ ಆರಂಭವಾದುದ್ದು ಬಿ.ಎ.ಓದುತ್ತಿದ್ದ ದಿನಗಳಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಪ್ರೆಸ್‌ನಲ್ಲಿ ಉ.ಕಾ. ಸುಬ್ಬರಾಯಾಚಾರ್ ಅವರು ಅಧಿಕಾರದಲ್ಲಿದ್ದಾಗ ಬಡ ವಿದ್ಯಾರ್ಥಿಗಳಿಗಾಗಿದ್ದ ಅರ್ನ್ ಅಂಡ್ ಲರ್ನ್ ಯೋಜನೆಯಡಿ ಕೆಲಸ ಮಾಡಿ ಬಂದ 5 ರು. ಹಣದಲ್ಲಿ ರಾಮಕೃಷ್ಣ ಮಿಷನ್ ಪ್ರಕಟಣೆಯ ಸಣ್ಣ ಸಣ್ಣ ಪುಸ್ತಕಗಳನ್ನು ಕೊಳ್ಳುವ ಮೂಲಕ ಸಂಗ್ರಹ ಆರಂಭಿಸಿದರು. ಆರಂಭದಲ್ಲಿ ನಿಧಾನವಾಗಿ ನಡೆದ ಈ ಕಾರ್ಯ ಆ ನಂತರ ಪುಸ್ತಕದಾಹ ತೀರಿಸಿಕೊಳ್ಳುವ ಭರದಲ್ಲಿ ಸಾಗಿತ್ತು. ಎಂ.ಎ.ಪದವಿ ಪಡೆದು ಸಾಹಿತ್ಯದ ವಿದ್ಯಾರ್ಥಿಯಾದರೂ ಅಂಕೇಗೌಡರು ಸೇರಿದ್ದು ಪಾಂಡವಪುರದ ಸಹಕಾರ ಸಕ್ಕರೆ ಕಾರ್ಖಾನೆ ಸಾಮಾನ್ಯ ದಿನಗೂಲಿ ನೌಕರನಾಗಿ. ಕಾಲ ಕ್ರಮೇಣ ಮೇಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ತಮ್ಮ ಸಂಬಳದ ಶೇ.60ರಷ್ಟು ಭಾಗವನ್ನು ಪುಸ್ತಕ ಖರೀದಿಗೆ ಮೀಸಲಿಟ್ಟರು. ಪುಸ್ತಕಗಳ ಖರೀದಿಯಿಂದ ಗ್ರಂಥ ರಾಶಿಯೇ ಸೃಷ್ಟಿಯಾಯಿತು.
ಪಾಂಡವಪುರ ವಿಶ್ವೇಶ್ವರನಗರದ ನಾಲ್ಕೂವರೆ ಚದರದ ಅವರ ಪುಟ್ಟ ಮನೆಯಲ್ಲಿ ಪುಸ್ತಕದ ರಾಶಿ ಇಡೀ ಮನೆಯನ್ನೇ ಆವರಿಸಿತ್ತು. ಅವರ ಮನೆಯನ್ನು ನೋಡುತ್ತಿದ್ದವರಿಗೆ ಅದೊಂದು ಪುಸ್ತಕದ ಮೆದೆ ಎನಿಸುತ್ತಿತ್ತು. ಪುಸ್ತಕಗಳ ಬೃಹತ್ ಸಂಗ್ರಹ ಹೊಂದಿರುವ ಅಂಕೇಗೌಡರಿಗೆ ಅವುಗಳ ರಕ್ಷಣೆ ಕೂಡ ದೊಡ್ಡ ಸವಾಲು ಹಾಗೂ ಜವಾಬ್ದಾರಿಯಾಗಿತ್ತು.
ಉದ್ಯಮಿಯಾಗಿದ್ದ ಹರಿಖೋಡೆ ಅವರು ಆಕಸ್ಮಿಕವಾಗಿ ಅಂಕೇಗೌಡರ ಮನೆಗೆ ಭೇಟಿ ನೀಡಿದ ವೇಳೆ ಪುಸ್ತಕ ಸಂಗ್ರಹ ನೋಡಿ ಬೆರಗಾದರು. ಪುಸ್ತಕಗಳ ರಕ್ಷಣೆಗೆ ಸಹಾಯದ ಭರವಸೆ ನೀಡಿ 2005ರಲ್ಲಿ 12 ಲಕ್ಷ ರು. ಮೌಲ್ಯದ ನಿವೇಶನ ಖರೀದಿಸಿ ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಅಡಿ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಬೃಹತ್ ಗ್ರಂಥಾಲಯ ನಿರ್ಮಿಸಿಕೊಟ್ಟರು. ನಂತರ ಗ್ರಂಥಾಲಯವೇ ಈಗ ಅಂಕೇಗೌಡ ‘ಪುಸ್ತಕ ಮನೆ’ ಎಂಬ ಹೆಸರಿನಲ್ಲಿ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ.
ಹುಡುಕಿ ಬಂದ ಹಲವು ಪ್ರಶಸ್ತಿಗಳು:
ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮೇನಾಗರ ಪ್ರಕಾಶ್ ಸೇರಿದಂತೆ ಅನೇಕ ಸಾಹಿತಿಗಳು, ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಚಿನಕುರಳಿಯಲ್ಲಿ 5ನೇ ತರಗತಿ ಓದು ಮುಗಿಯುತ್ತಿದ್ದಂತೆಯೇ ತಂದೆ ಕುರಿ ಕಾಯುವುದಕ್ಕೆ ನೇಮಿಸಿದರು. ಕುರಿ ಕಾಯುವ ಕೆಲಸದಲ್ಲಿ ನಿರತರಾಗಿದ್ದರೂ ಓದಿನ ಆಸಕ್ತಿಯೇನು ಕುಂದಿರಲಿಲ್ಲ. ಇದನ್ನು ಗಮನಿಸಿದ ಪರಮೇಶ್ವರಯ್ಯ, ಅನಂತಯ್ಯ ಎಂಬ ಶಿಕ್ಷಕರ ಸಹಾಯದಿಂದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ನೇರವಾಗಿ ತೆಗೆದುಕೊಂಡು ಉತ್ತೀರ್ಣರಾಗಿ 10ನೇ ತರಗತಿ ವರೆಗಿನ ಶಿಕ್ಷಣವನ್ನು ಆ ಗ್ರಾಮದಲ್ಲೇ ಪಡೆದರು.
ಆದರೂ ಕೆಲಸ ನಡುವೆ ಇಂಟರ್ ಮಿಡಿಯೆಟ್‌ನಲ್ಲಿ ಮೇಷ್ಟ್ರಾಗಿದ್ದ ಗೋಪಿನಾಥ್ ಬರ್ಕಿ ಅವರ ಮಾತುಗಳಿಂದ ಇವರು ಬದುಕು ಗಮನಾರ್ಹ ತಿರುವು ಪಡೆಯಿತು. ಮತ್ತೆ ವಿದ್ಯಾಭ್ಯಾಸದತ್ತ ಮುಖ ಮಾಡಿದ ಅಂಕೇಗೌಡರು 1971-73ರಲ್ಲಿ ಮೈಸೂರಿನ ಮಹಾರಾಜ ಸಂಜೆ ಕಾಲೇಜಿನಲ್ಲಿ ಬಿ.ಎ.ಪದವಿ, 1976-77 ರಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಎಂಎ ಪದವಿ ಪಡೆದುಕೊಂಡರು.