ಕನ್ನಡಪ್ರಭ ವಾರ್ತೆ ಹಾಸನ
ನಗರದ ವಾಣಿವಿಲಾಸ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ. ಶಿಕ್ಷಕರು ಮಕ್ಕಳ ದಾಖಲಾತಿಗಾಗಿ ಮನೆಮನೆಗೆ ಭೇಟಿ ನೀಡಿ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಗರದ ಹೃದಯ ಭಾಗದಲ್ಲಿರುವ ಈ ಶಾಲೆ ೧೨೫ ವರ್ಷಗಳನ್ನು ಪೂರೈಸಿದೆ. ಈ ಹಳೆಯ ಶಾಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದ ಶಾಸಕರು, ಶಾಲೆಗಳ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗಾಗಿ ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.ಪೂರ್ವಜರು ಶಾಲೆಗಳಿಗೆ ದಾನವಾಗಿ ನೀಡಿರುವ ಜಾಗಗಳು ಅತ್ಯಂತ ಬೆಲೆ ಬಾಳುವುದರಿಂದ ಮೊಮ್ಮಕ್ಕಳು ಸದರಿ ಜಾಗಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ. ಶಾಲೆಗಳ ಹೆಸರಿಗೆ ಖಾತೆ ಮಾಡುವ ಮೂಲಕ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಸರ್ಕಾರದ ಆದೇಶದಂತೆ ೨೦೨೫- ೨೬ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಜಿಲ್ಲಾದ್ಯಂತ ಎಲ್ಲಾ ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಗಾಗಿ ಆಂದೋಲನ ನಡೆಸಲಾಗುತ್ತಿದೆ. ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ೪೩ ಸಾವಿರ ಕೋಟಿ ರು. ಗಳನ್ನು ಮೀಸಲಿಟ್ಟು, ಕಲಿಕೆ ಉತ್ತಮಪಡಿಸಲು ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾತನಾಡಿ, ಪ್ರಾಥಮಿಕ ಹಂತದಿಂದಲೇ ಮಕ್ಕಳು ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ತಮ್ಮ ಶೈಕ್ಷಣಿಕ ಉಜ್ವಲ ಭವಿಷ್ಯಕ್ಕೆ ಹೊಸ ಹೊಸ ಕನಸುಗಳನ್ನು ಕಾಣುವುದರ ಮೂಲಕ ಸಾಕಾರಗೊಳಿಸಿಕೊಳ್ಳುವಂತೆ ತಿಳಿಸಿದರು.
ಮಹೇಶ್, ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳಾದ ರವೀಂದ್ರ, ಅಕ್ಷರ ದಾಸೋಹ ಅಧಿಕಾರಿ ಮಂಜು ನಾಯಕ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮತ್ತಿತರರು ಉಪಸ್ಥಿತರಿದ್ದರು.