ಗದಗ: ಯಾವ ಮಕ್ಕಳೂ ದಡ್ಡರಾಗಿ ಇರುವುದಿಲ್ಲ. ಪಾಲಕರೇ ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಶಿಕ್ಷಣತಜ್ಞ ಸುರೇಶ್ ಕುಲಕರ್ಣಿ ಅಭಿಪ್ರಾಯಪಟ್ಟರು. ತಾಲೂಕಿನ ಹರ್ಲಾಪುರದ ಶ್ರೀಮತಿ ಕಮಲಾಬಾಯಿ ನಾರಾಯಣರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಇತ್ತೀಚೆಗೆ 2006- 07ನೇ ಸಾಲಿನ ಪ್ರೌಢಶಾಲೆ ಮತ್ತು 2003- 04ನೇ ಸಾಲಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳನ್ನು ನಾವು ಅಂಕ ಆಧರಿತವಾಗಿ ಅಳೆಯುತ್ತಿದ್ದೇವೆ. ಇದು ಸರಿಯಲ್ಲ. ಅವರೊಳಗಿನ ಕೌಶಲ್ಯಗಳನ್ನು ಹೆಕ್ಕಿ ತೆಗೆಯಬೇಕು. ಅವರ ಗುರಿಗಳನ್ನು ಬೆನ್ನಟ್ಟುವಂತೆ ಮಾಡಿ ಪ್ರೋತ್ಸಾಹಿಸಬೇಕು. ಕೇವಲ ಶಾಲೆಗೆ ಮಕ್ಕಳನ್ನು ಸೇರಿಸಿ, ಮುಂದೆ ಶಿಕ್ಷಕರೇ ಎಲ್ಲ ನೋಡಿಕೊಳ್ಳುತ್ತಾರೆ ಎನ್ನುವ ಮನೋಭಾವದಿಂದ ಹೊರಗೆ ಬರಬೇಕು ಎಂದರು.
ಗದಗ ಗ್ರಾಮೀಣದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹರ್ಲಾಪುರದ ಪ್ರೌಢಶಾಲೆಯನ್ನು ನಾನು ದತ್ತು ಪಡೆದು, ಕೆಲವು ಬದಲಾವಣೆ ಮಾಡಿದ್ದರಿಂದ ಈ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. ಇಂತಹ ಶಾಲೆಯಲ್ಲಿ ಇಷ್ಟು ಅದ್ಧೂರಿಯಾಗಿ ಗುರುವಂದನಾ ಕಾರ್ಯಕ್ರಮ ಮಾಡಿದ್ದು ಬಹಳ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಲ್. ಕುಲಕರ್ಣಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ. ಉದಯ್ ಕುಮಾರ್, ಪ್ರೌಢಶಾಲೆಗೆ ಭೂಮಿ ದಾನ ಮಾಡಿದ ಗಣ್ಯರಾದ ನಾರಾಯಣ ಕುಲಕರ್ಣಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಶಿಕ್ಷಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.ಪತ್ರಕರ್ತ ಶರಣು ಚಕ್ರಸಾಲಿ ಕಾರ್ಯಕ್ರಮ ನಿರ್ವಹಿಸಿದರು. ಶಿವು ಯಡಿಯಾಪುರ, ಅಡಿವೆಪ್ಪ ಗೌಡಪ್ಪನವರ, ಗುರುಬಸಮ್ಮ ಕಟ್ಟಿಮನಿ ಸ್ವಾಗತಿಸಿದರು. ಪ್ರಕಾಶ ಯಾಳವಾಡ ವಂದಿಸಿದರು.