ಹೈಕೋರ್ಟ್‌ ಪೀಠ ಧಾರವಾಡದಲ್ಲಿ ಆರಂಭಗೊಳ್ಳುವಲ್ಲಿ ವಕೀಲರ ಕೊಡುಗೆ ಸಾಕಷ್ಟಿದೆ. ಯುವ ವಕೀಲರು ಹಿರಿಯರಿಂದ ಕಲಿತು ವೃತ್ತಿ ಜೀವನ ರೂಪಿಸಿಕೊಳ್ಳಬೇಕು.

ಧಾರವಾಡ:

ಕಕ್ಷಿದಾರರ ಮನೆ ಬಾಗಿಲಿಗೆ ನ್ಯಾಯ ತಲುಪಿಸುವ ಉದ್ದೇಶದಿಂದ ಧಾರವಾಡದಲ್ಲಿ ಆರಂಭಗೊಂಡ ಹೈಕೋರ್ಟ್‌ ಪೀಠ ನ್ಯಾಯಾಂಗ ಕ್ಷೇತ್ರದಲ್ಲಿ ಪ್ರಮುಖ ಮೈಲುಗಲ್ಲು ಎಂದು ನ್ಯಾಯಮೂರ್ತಿ ಎಸ್‌. ಸುನೀಲದತ್ತ ಯಾದವ ಹೇಳಿದರು.

ಇಲ್ಲಿಯ ಹೈಕೋರ್ಟ್‌ ಪೀಠದಲ್ಲಿ ಮಂಗಳವಾರ ನಡೆದ 18ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೀಠವು 18 ವರ್ಷಗಳಿಂದ ಸಾಕಷ್ಟು ಪ್ರಗತಿ ಸಾಧಿಸಿದೆ. ಇದರಿಂದ ಈ ಭಾಗದ ಸಾಕಷ್ಟು ಯುವ ವಕೀಲರಿಗೆ ಸದಾವಕಾಶ ಲಭಿಸಿದ್ದು ಯುವ ವಕೀಲರು ಪರಂಪರೆ ಉಳಿಸಿಕೊಂಡು ಹೋಗುವುದು ಅಗತ್ಯ ಎಂದರು.

ನ್ಯಾಯಮೂರ್ತಿ ಸಚಿನ್ ಮಗದುಮ್ ಮಾತನಾಡಿ, ಹೈಕೋರ್ಟ್‌ ಪೀಠ ಧಾರವಾಡದಲ್ಲಿ ಆರಂಭಗೊಳ್ಳುವಲ್ಲಿ ವಕೀಲರ ಕೊಡುಗೆ ಸಾಕಷ್ಟಿದೆ. ಯುವ ವಕೀಲರು ಹಿರಿಯರಿಂದ ಕಲಿತು ವೃತ್ತಿ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ವಕೀಲ ಬಸವಪ್ರಭು ಹೊಸಕೇರಿ ಮಾತನಾಡಿ, ಇದು ಉತ್ತರ ಕರ್ನಾಟಕದ ಪಾಲಿಗೆ ಐತಿಹಾಸಿಕ ಕ್ಷಣ. 18 ವರ್ಷಗಳ ಹೋರಾಟಗಳಿಂದಾಗಿ ಧಾರವಾಡಕ್ಕೆ ಹೈಕೋರ್ಟ್ ಪೀಠ ಬಂದಿದ್ದು, ಈಗ ಸಂಸ್ಥಾಪನಾ ದಿನಾಚರಣೆ ನಮಗೆಲ್ಲ ಹೆಮ್ಮೆ ಹಾಗೂ ಸಂತಸದ ಸಂಗತಿ. ಇದು ಸಂವಿಧಾನದತ್ತ ಹಕ್ಕುಗಳಿಗಾಗಿ ನಡೆದ ಹೋರಾಟವಾಗಿತ್ತು. ಸಾಕಷ್ಟು ಅವಮಾನ, ಅವಹೇಳನ ಸಹಿಸಿ ಹೈಕೋರ್ಟ್ ಪೀಠ ಪಡೆದುಕೊಂಡಿದ್ದೇವೆ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ನ್ಯಾಯದಾನ ಸುಗಮವಾಗಿದೆ. ಅಲ್ಲದೇ ಇಲ್ಲಿನ ಪ್ರತಿಭೆಗಳಿಗೆ ಅವಕಾಶ ದೊರೆತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ಧಾರವಾಡ ಹಾಗೂ ಕಲಬುರಗಿಯಲ್ಲಿ ಹೋರಾಟದ ಫಲವಾಗಿ ಹೈಕೋರ್ಟ್‌ ಪೀಠಗಳು ಅಸ್ತಿತ್ವಕ್ಕೆ ಬಂದಿವೆ. ಉತ್ತರ ಕರ್ನಾಟಕದ ಜನರು, ಮಾಧ್ಯಮಗಳ ಸಹಕಾರದಿಂದ ನಮ್ಮ ಹೋರಾಟಕ್ಕೆ ಫಲ ಲಭಿಸಿದೆ. ಈ ಹೋರಾಟವನ್ನು ಅರಿತು ಯುವ ವಕೀಲರು ವೃತ್ತಿ ಘನತೆ ಕಾಪಾಡಬೇಕು ಎಂದರು.

ಹಿರಿಯ ನ್ಯಾಯವಾದಿಗಳಾದ ಶ್ರೀಕಾಂತ ಪಾಟೀಲ, ವಿದ್ಯಾವತಿ ಕೊಟ್ಟೂರಶೆಟ್ಟರ್, ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟವನ್ನು ಸ್ಮರಿಸಿಕೊಂಡರು.

ನ್ಯಾಯಮೂರ್ತಿ ಅನಂತ ಹೆಗಡೆ ಹಾಗೂ ಇಂಟರ್‌ ನ್ಯಾಷನಲ್ ಕೌನ್ಸಿಲ್ ಆಫ್ ಜುರಿಸ್ಟ್‌ ಲಂಡನ್ ಅಧ್ಯಕ್ಷ ಡಾ. ಆದಿಶ್ ಅಗರವಾಲ ಮಾತನಾಡಿದರು. ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ, ತಾರಾ ಗಂಜು, ಸಿ.ಎಂ. ಪೂಣಚ್ಚ, ಟಿ.ಎಂ. ನದಾಫ, ಗೀತಾ ಕೆ.ಬಿ. ಮುರಳಿಧರ ಪೈ ಇದ್ದರು. ಆದರ್ಶ ಮಿಟ್ಟಲಕೋಡ ವಂದಿಸಿದರು.