ಪುಸ್ತಕದ ಹುಳುಗಳಾಗದೆ ಪಠ್ಯೇತರ ಚಟುವಟಿಕೆಯಲ್ಲೂ ಪಾಲ್ಗೊಳ್ಳಿ

KannadaprabhaNewsNetwork |  
Published : Jul 15, 2026, 02:00 AM IST
13 ಟಿವಿಕೆ 2 – ತುರುವೇಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕೇವಲ ಪುಸ್ತಕವೇ ಸರ್ವಸ್ವವೆಂದು ತಿಳಿದು ಪುಸ್ತಕದ ಹುಳುಗಳಾಗದೇ, ಪಠ್ಯೇತರ ಚಟುವಟಿಕೆಗಳಿಗೂ ಸಮಯ ನೀಡಿ ನಿಮ್ಮ ಸಂಪೂರ್ಣ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಿ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಎಸ್.ರಾಧಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ವಿದ್ಯಾರ್ಥಿಗಳು ಕೇವಲ ಪುಸ್ತಕವೇ ಸರ್ವಸ್ವವೆಂದು ತಿಳಿದು ಪುಸ್ತಕದ ಹುಳುಗಳಾಗದೇ, ಪಠ್ಯೇತರ ಚಟುವಟಿಕೆಗಳಿಗೂ ಸಮಯ ನೀಡಿ ನಿಮ್ಮ ಸಂಪೂರ್ಣ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಿ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಎಸ್.ರಾಧಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ, ಎನ್ ಎಸ್ ಎಸ್, ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪಿಯುಸಿಯಲ್ಲಿ ಅಂಕಗಳಿಸುವುದು ಮುಖ್ಯ. ಆದರೆ ಅಂಕವೊಂದೇ ನಿಮ್ಮ ಭವಿಷ್ಯವನ್ನು ರೂಪಿಸದು. ಅಂಕದೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಅದೂ ಕಾರಣವಾಗಲಿದೆ. ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಸನ್ನಡತೆ, ಸದಭಿರುಚಿಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ನಿಮ್ಮ ಪೋಷಕರು ನಿಮ್ಮಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಆಸೆಗೆ ತಣ್ಣೀರೆರೆಚದೇ ಬಹಳ ಶ್ರದೆಯಿಂದ ಓದಿ ಅವರ ಆಸೆಯನ್ನು ಈಡೇರಿಸಿ ಎಂದರು.

ಕನ್ನಡ ಜಾನಪದ ಪರಿಷತ್ ನ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್ ಬಾಲಾಜಿ ಮಾತನಾಡಿ ಜಾನಪದದ ಮೂಲ ಕೃಷಿ ಸಂಸ್ಕೃತಿ. ಜಾನಪದ ತಾಯಿಯಂತೆ ಎಲ್ಲಾ ಸಂಸ್ಕೃತಿಯನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಸಂತೈಸಿದೆ. ಇತ್ತೀಚೆಗೆ ವಿದೇಶೀ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಯುವಶಕ್ತಿ ಜಾನಪದ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಾನಪದ ಲೋಕವನ್ನು ಶ್ರೀಮಂತಗೊಳಿಸಬೇಕೆಂದರು. ಜಾನಪದಕ್ಕೆ ಜಾತಿ, ಧರ್ಮ, ಇತಿ ಮಿತಿ ಇಲ್ಲ. ಅದು ಸಾಯುವುದಿಲ್ಲ. ಪರಿವರ್ತನೆ ಆಗಬಹುದು. ಎಲ್ಲಾ ಸಾಹಿತ್ಯಗಳ ಮೂಲ ಜಾನಪದವೇ ಆಗಿದೆ. 12 ಲಕ್ಷ ಬುಡಕಟ್ಟು ಜನಾಂಗವಿದೆ. ಅವರ ಹುಟ್ಟು, ಜೀವನ ಮತ್ತು ಸಾವಿನಲ್ಲಿ ಜಾನಪದ ಹಾಸುಹೊಕ್ಕಾಗಿದೆ. 270 ಮಂದಿ ಜಾನಪದದಲ್ಲಿ ಪಿಎಚ್ ಡಿ ಮಾಡಿದ್ದಾರೆ. ಮನುಷ್ಯ ಹುಟ್ಟಿದ ದಿನದಿಂದ ಜಾನಪದ ಹುಟ್ಟಿದೆ. ಜಾನಪದ ಎಲ್ಲಾ ಸಂಸ್ಕೃತಿಯನ್ನು ಬೆಸೆಯುತ್ತದೆ ಎಂದರು. ಜಾನಪದವು ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮಹತ್ತರವಾದ ಪಾತ್ರ ವಹಿಸಿದೆ. ಗೀಗೀ ಪದ, ಲಾವಣಿ ಪದಗಳಿಂದ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಲಾಗಿತ್ತು. ನಮ್ಮಲ್ಲಿ ಜಾನಪದ ಪ್ರತಿ ಮನೆಯಲ್ಲೂ ಮೇಳೈಸಿದೆ. ನಮ್ಮಲ್ಲಿ ವಿವಿಧ ಸಂಸ್ಕೃತಿಗಳ ಆಚರಣೆ ಇದೆ. ಆದರೆ ಇತ್ತೀಚೆಗೆ ಹೊರ ದೇಶದ ಸಂಸ್ಕೃತಿಯನ್ನು ಹೊರದಬ್ಬಿ, ದೇಶೀಯ ಸಂಸ್ಕೃತಿಯಾದ ಜಾನಪದವನ್ನು ತಬ್ಬಿಕೊಳ್ಳುವ ಕಾಲ ಸನ್ನಿಹಿತವಾಗುತ್ತಿರುವುದು ಆಶಾದಾಯಕ ಬೆಳೆವಣಿಗೆ ಎಂದು ಎಸ್.ಬಾಲಾಜಿ ಹೇಳಿದರು.

ಈ ವೇಳೆ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಅಶ್ವತ್ಥ್ ಜಿ.ಪದುಮಗಿರಿ, ಕಾಲೇಜಿನ ಪ್ರಾಂಶುಪಾಲ ವಿ.ಎನ್. ನಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಇಸಿಓ ಜಗದೀಶ್, ಶಾಲಾ ಶಿಕ್ಷಣ ಇಲಾಖೆಯ ರಾಮಣ್ಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು, ಉಪ ಪ್ರಾಂಶುಪಾಲ ಜೆ.ಬಿ.ವೆಂಕಟೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಾಪಣ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಕೋಮಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ತ್ರಿಮೂರ್ತಿ ಸ್ವಾಗತಿಸಿದರು. ರಶ್ಮಿತಾ ನಿರೂಪಿಸಿದರು. ಹರೀಶ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಕೆರೆ ಹೊಳೆತ್ತುವ ಕಾಮಗಾರಿ ಭೂಮಿ ಪೂಜೆ
ನಾಳೆ ರೈತ ಜಾಗೃತ ಸಮಾವೇಶ: ಡಾ. ವಾಸುದೇವ ಮೇಟಿ