ಬಳ್ಳಾರಿ: ಅಕ್ರಮ ದತ್ತು ಕಾರ್ಯದಲ್ಲಿ ಭಾಗವಹಿಸುವುದು ಅಪರಾಧವಾಗಿದ್ದು, ಭಾಗವಹಿಸಿರುವುದು ದೃಢವಾದಲ್ಲಿ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲು ಕಾನೂನಿನಡಿ ಅವಕಾಶವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ತಿಳಿಸಿದರು.
ಮಾನವನ ಜೀವ ಅತೀ ಅಮೂಲ್ಯವಾಗಿದ್ದು, ಯಾವುದೇ ಕಾರಣದಿಂದಾಗಿ ಪೋಷಕರು ನವಜಾತ ಶಿಶುಗಳನ್ನು ಬಿಟ್ಟುಹೋಗಿರುವುದು ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಗಮನಕ್ಕೆ ತರಬೇಕು. ಅಂತಹ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡಿ, ಒಳ್ಳೆಯ ಕುಟುಂಬ ಮತ್ತು ಪೋಷಕರಿಗೆ ದತ್ತು ನೀಡುವ ಮೂಲಕ ಅಂತಹ ಮಕ್ಕಳಿಗೆ ಒಳ್ಳೆಯ ಜೀವನ ನೀಡಲು ಸಾಧ್ಯ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಕಾನೂನಿನ ನೆರವು ಅಗತ್ಯವುಳ್ಳ ಬಡ ಮತ್ತು ನಿರ್ಗತಿಕ ಕುಟುಂಬಗಳು ಉಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಸೇವೆ ಪಡೆದುಕೊಳ್ಳಬಹುದು ಎಂದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ ಮಾತನಾಡಿ, ಮಕ್ಕಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಕ್ಕಳನ್ನು ಬಾಲ್ಯವಿವಾಹ, ಬಾಲಕಾರ್ಮಿಕ, ಭಿಕ್ಷಾಟನೆ, ಲೈಂಗಿಕ ಕಿರುಕುಳ ಮತ್ತು ಇನ್ನಿತರೆ ಸಂಕಷ್ಟಕ್ಕೆ ಒಳಗಾದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದುವೇಳೆ ಅಂತಹ ಸಮಸ್ಯೆಗಳು ಎದುರಿಸುತ್ತಿದ್ದರೆ, ಇಲ್ಲವೇ ಕಂಡುಬಂದಲ್ಲಿ ನಿರ್ಭಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, 112ಗೆ ಕರೆ ಮಾಡಬೇಕು. ಮಾಹಿತಿ ನೀಡಿದವರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಲಲಿತಮ್ಮ ಅವರು ಮಾತನಾಡಿ, ಹೆಣ್ಣು ಮಕ್ಕಳು ಅಂತರ್ಜಾಲದಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಮತ್ತು ಫೋಟೋಗಳನ್ನು ಹಂಚಿಕೊಳ್ಳಬಾರದು. ಸೈಬರ್ ಕ್ರೈಂ ಕುರಿತು ಅರಿವು ಪ್ರತಿಯೊಬ್ಬರೂ ಹೊಂದಬೇಕು ಎಂದು ಹೇಳಿದರು.
ವಸತಿ ಶಾಲೆಯ ಪ್ರಾಂಶುಪಾಲ ಕೆ.ಎಂ. ಮೂಕಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಮಕ್ಕಳ ಸಹಾಯವಾಣಿ ಸಂಖ್ಯೆ-1098, ಪೊಲೀಸ್ ಸೇವೆ-112, ಸೈಬರ್ ಕ್ರೈಂ -1930 ಮತ್ತು ಉಚಿತ ರಾಷ್ಟ್ರೀಯ ಕಾನೂನು ಸೇವೆಗಳ ಸಂಖ್ಯೆ -15100ಗಳನ್ನು ನೆನಪಿಟ್ಟುಕೊಂಡು ಅಗತ್ಯ ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನಾಗಯ್ಯ ಹಿರೇಮಠ, ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್, ಮಕ್ಕಳ ಸಹಾಯವಾಣಿ ಸಂಯೋಜಕ ಕೆ. ಆನಂದ, ಮಿಷನ್ ಶಕ್ತಿ ಸಂಯೋಜಕಿ ಶಹಜಹಾನ್, ದತ್ತು ಸಂಸ್ಥೆಯ ಸಿಬ್ಬಂದಿ ಗಣೇಶ್ ಸೇರಿದಂತೆ ವಸತಿ ಶಾಲೆಯ ಶಿಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ವಸತಿ ನಿಯಲದ 300ಕ್ಕೂ ಹೆಚ್ಚು ಮಕ್ಕಳು ಉಪಸ್ಥಿತರಿದ್ದರು.