ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ರೋಗಿಗಳ ಪರದಾಟ

KannadaprabhaNewsNetwork |  
Published : Jun 11, 2024, 01:33 AM IST
ಕೆ ಕೆ ಪಿ ಸುದ್ದಿ 01:ಕೋಡಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ  ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದೆ ಚಿಕಿತ್ಸೆಗಾಗಿ ಕಾದು ಕುಳಿತಿರುವ ಸಾರ್ವಜನಿಕರು. | Kannada Prabha

ಸಾರಾಂಶ

ಕಾಯಂ ವೈದ್ಯರಿಲ್ಲದೇ ಇರುವುದರಿಂದ ಬೇರೊಂದು ಆರೋಗ್ಯ ಕೇಂದ್ರದ ವೈದ್ಯರನ್ನು ಪ್ರಭಾರವಾಗಿ ಇಲ್ಲಿ ನಿಯೋಜಿಸಿದ್ದಾರೆ. ವೈದ್ಯರು ತಡವಾಗಿ ಆಸ್ಪತ್ರೆಗೆ ಬರುತ್ತಾರೆ,

ಕನ್ನಡಪ್ರಭ ವಾರ್ತೆ ಕನಕಪುರ

ಕೋಡಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಕೋಡಿಹಳ್ಳಿ ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಟೆಗಟ್ಟಲೆ ಕಾದರೂ ವೈದ್ಯರು ಸಿಗದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದೇ ಪ್ರಭಾರವಾಗಿ ನಿಯೋಜನೆಗೊಂಡಿರುವ ವೈದ್ಯರು, ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ಹೋಬಳಿ ಕೇಂದ್ರದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ, ಆದರೆ ಅದರ ಉಪಯೋಗ ಮಾತ್ರ ಸಾರ್ವಜನಿಕರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರನ್ನು ಸರ್ಕಾರ ನಿಯೋಜಿಸದೇ ಇರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಕೋಡಿಹಳ್ಳಿ ಹೋಬಳಿ ಕೇಂದ್ರ ಹತ್ತಾರು ಗ್ರಾಮಗಳಿಗೆ ಸಂಪರ್ಕಕ್ಕೆ ಕೊಂಡಿಯಾಗಿದೆ, ಆದರೂ ಇಲ್ಲಿ ರಾತ್ರಿ ವೇಳೆ ತುರ್ತು ಚಿಕಿತ್ಸಾ ಸೌಲಭ್ಯವೂ ಇಲ್ಲ, ತುರ್ತು ಚಿಕಿತ್ಸೆಗೆ ಕನಕಪುರ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ ಎಂಬುದು ಸಾರ್ವಜನಿಕರ ದೂರು.

ಕೋಡಿಹಳ್ಳಿ ಹೋಬಳಿ ಕೇಂದ್ರ ಪ್ರತಿನಿತ್ಯ ಸುತ್ತಮುತ್ತಲಿನ ಗ್ರಾಮೀಣ ಭಾಗದ ನೂರಾರು ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಾರೆ. ಕಾಯಂ ವೈದ್ಯರಿಲ್ಲದೇ ಇರುವುದರಿಂದ ಬೇರೊಂದು ಆರೋಗ್ಯ ಕೇಂದ್ರದ ವೈದ್ಯರನ್ನು ಪ್ರಭಾರವಾಗಿ ಇಲ್ಲಿ ನಿಯೋಜಿಸಿದ್ದಾರೆ. ವೈದ್ಯರು ತಡವಾಗಿ ಆಸ್ಪತ್ರೆಗೆ ಬರುತ್ತಾರೆ, ಹಾಗಾಗಿ ರೋಗಿಗಳು ಸಹ ವೈದ್ಯರಿಗಾಗಿ ಕಾದು ಕುಳಿತುಕೊಳ್ಳಬೇಕು. ಕಳೆದ ಗುರುವಾರ ಇಸಿಜಿಗಾಗಿ ಹಲವಾರು ಗರ್ಭಿಣಿ, ಬಾಣಂತಿಯರು ಕಾದು ಕುಳಿತಿದ್ದರು, 11 ಗಂಟೆಯಾದರೂ ವೈದ್ಯರು ಹಾಗೂ ನರ್ಸ್‌ಗಳು ಸಹ ಆಸ್ಪತ್ರೆಗೆ ಬಂದಿರಲಿಲ್ಲ, ಗ್ರಾಮೀಣ ಭಾಗದ ಜನರಿಗೆ ಸಮರ್ಪಕವಾದ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

ಕೋಡಿಹಳ್ಳಿ ಭಾಗದಲ್ಲಿ ಸರಿಯಾದ ಖಾಸಗಿ ಆಸ್ಪತ್ರೆಗಳ ಸೌಲಭ್ಯವೂ ಇಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರಿಲ್ಲ. ಹಾಗಾಗಿ ಗ್ರಾಮೀಣ ಭಾಗದ ಜನರು ಸಾರ್ವಜನಿಕ ಆಸ್ಪತ್ರೆಯನ್ನು ನಂಬಿಕೊಂಡಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲೂ ಸಮರ್ಪಕವಾದ ಆರೋಗ್ಯ ಸೇವೆ ಸಿಗದೇ ಇರುವುದು ಜನರಿಗೆ ತೊಂದರೆಯಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಸೂಕ್ತ ಆರೋಗ್ಯ ಸೇವೆ ಕೊಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

‘ಕೊಡಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಐದಾರು ವರ್ಷಗಳಿಂದ ಕಾಯಂ ವೈದ್ಯರೇ ಇಲ್ಲ. ಬೇರೊಂದು ಆರೋಗ್ಯ ಕೆಂದ್ರದ ವೈದ್ಯರನ್ನು ಪ್ರಭಾರವಾಗಿ ನಿಯೋಜಿಸಿದ್ದಾರೆ. ಅವರು ಸಮಯಕ್ಕೆ ಸರಿಯಾಗಿ ಬಾರದೆ ಇರುವುದು ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಮಸ್ಯೆ ಬಗ್ಗೆ ಗಮನಹರಿಸಿ ಆರೋಗ್ಯ ಇಲಾಖೆ ಜನರಿಗೆ ಸಮರ್ಪಕ ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು.’

ನಲ್ಲಹಳ್ಳಿ ಶ್ರೀನಿವಾಸ್, ರೈತ ಮುಖಂಡ‘ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ, ಕೋಟೆಕೊಪ್ಪ ಮತ್ತು ಹೊಸದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಪ್ರಭಾರವಾಗಿ ನಿಯೋಜನೆ ಮಾಡಿದ್ದೇವೆ. ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆ ಸಿಗುವಂತೆ ಕ್ರಮವಹಿಸುತ್ತೇವೆ.’

ರಾಜು, ಪ್ರಭಾರ ಟಿಎಚ್ಒ, ಕನಕಪುರ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ