ಪವಿತ್ರಾ ಗೌಡ ಮನೆ ಮಹಜರು, ಮಹತ್ವದ ಸಾಕ್ಷ್ಯ ಸಂಗ್ರಹ

KannadaprabhaNewsNetwork |  
Published : Jun 17, 2024, 01:33 AM ISTUpdated : Jun 17, 2024, 06:09 AM IST
Darshan Thoogudeepa-Pavithra Gowda Relationship

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರೋಪಿ ಪವಿತ್ರಾ ಗೌಡ ಸೇರಿ ಕೆಲ ಆರೋಪಿಗಳ ಮನೆಗಳಲ್ಲಿ ಸ್ಥಳ ಮಹಜರು ನಡೆಸಿ ಕೆಲ ಮಹತ್ವದ ಸಾಕ್ಷ್ಯ ಸಂಗ್ರಹಿಸಿದ್ದಾರೆ.

  ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರೋಪಿ ಪವಿತ್ರಾ ಗೌಡ ಸೇರಿ ಕೆಲ ಆರೋಪಿಗಳ ಮನೆಗಳಲ್ಲಿ ಸ್ಥಳ ಮಹಜರು ನಡೆಸಿ ಕೆಲ ಮಹತ್ವದ ಸಾಕ್ಷ್ಯ ಸಂಗ್ರಹಿಸಿದ್ದಾರೆ.ರಾಜರಾಜೇಶ್ವರಿನಗರದಲ್ಲಿರುವ ಆರೋಪಿ ಪವಿತ್ರಾ ಗೌಡ ಅವರ ನಿವಾಸಕ್ಕೆ ಆರೋಪಿ ಪವನ್‌ ಮತ್ತು ಪವಿತ್ರಾ ಗೌಡ ಇಬ್ಬರನ್ನು ಕರೆತಂದು ಸ್ಥಳ ಮಹಜರು ನಡೆಸಿದರು.

ರೇಣುಕಾಸ್ವಾಮಿ ಕೊಲೆ ಬಳಿಕ ಪವಿತ್ರಾ ಗೌಡ ಘಟನೆ ನಡೆದ ಶೆಡ್‌ನಿಂದ ನೇರವಾಗಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಘಟನೆ ದಿನ ಪವಿತ್ರಾ ಗೌಡ ಧರಿಸಿದ್ದ ಬಟ್ಟೆ, ಚಪ್ಪಲಿಗಳ ಬಗ್ಗೆ ಪರಿಶೀಲಿಸಿದರು. ಆರೋಪಿ ಪವನ್, ದರ್ಶನ್‌ ಮತ್ತು ಪವಿತ್ರಾ ಗೌಡ ಇಬ್ಬರ ಮನೆಯಲ್ಲೂ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನೂ ಸ್ಥಳ ಮಹಜರಿಗೆ ಕರೆತಂದಿದ್ದರು.

ಜತೆಯಲ್ಲೇ ಕರೆತಂದಿದ್ದ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌)ದ ತಜ್ಞರ ತಂಡವು ಪವಿತ್ರಾ ಗೌಡ ಮನೆಯಲ್ಲಿ ಕೆಲವು ಮಾದರಿಗಳನ್ನು ಸಂಗ್ರಹಿಸಿದೆ. ಅಂತೆಯೆ ಪೊಲೀಸರು ಪವಿತ್ರಾ ಗೌಡ ಮನೆಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದರು. ಪವಿತ್ರಾ ಓಡಾಡುವ ಐಷಾರಾಮಿ ಸೇರಿ ಮೂರು ಕಾರುಗಳನ್ನೂ ತಪಾಸಣೆ ನಡೆಸಿದರು.

ಪವಿತ್ರಾ ಗೌಡ ವಾಸವಿದ್ದ ಮೂರು ಹಂತದ ಡ್ಯೂಪ್ಲೆಕ್ಸ್‌ ಮನೆಯಲ್ಲಿ ಸುಮಾರು ಒಂದೂವರೆ ತಾಸು ಪೊಲೀಸರು ಹಾಗೂ ಎಫ್ಎಸ್‌ಎಲ್‌ ತಜ್ಞರು ಮನೆಯ ಪ್ರತಿ ಭಾಗವನ್ನು ತಪಾಸಣೆ ನಡೆಸಿದರು. ಈ ವೇಳೆ ಮನೆ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್‌ನನ್ನು ಪಟ್ಟಣಗೆರೆ ಜಯಣ್ಣ ಅವರ ಮನೆಗೆ ಕರೆತಂದು ಸ್ಥಳ ಮಹಜರು ನಡೆಸಲಾಯಿತು. ಆರೋಪಿ ವಿನಯ್‌, ಜಯಣ್ಣ ಅವರ ತಂಗಿ ಮಗನಾಗಿದ್ದು, ಅವರ ಮನೆಯ ಕೊಠಡಿಯೊಂದರಲ್ಲಿ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಜಯಣ್ಣ ಅವರ ಮನೆಗೆ ಕರೆತಂದು ತಪಾಸಣೆ ನಡೆಸಿದರು.

ಸ್ಥಳ ಮಹಜರು ವೇಳೆ ಪವಿತ್ರಾ ಗೌಡ, ಪವನ್‌ ನಗುಮುಖ!ಪೊಲೀಸರು ಸ್ಥಳ ಮಹಜರಿಗೆ ಮನೆಗೆ ಕರೆತಂದ ವೇಳೆ ಪವಿತ್ರಾ ಗೌಡ ಮತ್ತು ಪವನ್‌ ನಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿ ಪವನ್‌ ಪೊಲೀಸರ ಭದ್ರತೆಯಲ್ಲಿ ಮನೆ ಪ್ರವೇಶಿಸುವ ನಗುತ್ತಾ ಹೋಗುತ್ತಾನೆ. ಸ್ಥಳ ಮಹಜರು ಮುಗಿಸಿ ಮನೆಯಿಂದ ಹೊರಗೆ ಬರುವಾಗ ಆರೋಪಿ ಪವಿತ್ರಾ ಸಹ ನಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...