ನರೇಗಾ ನೌಕರರ 5 ತಿಂಗಳ ಬಾಕಿ ವೇತನ ಪಾವತಿಸಿ

KannadaprabhaNewsNetwork |  
Published : May 30, 2025, 12:53 AM ISTUpdated : May 30, 2025, 12:12 PM IST
ಪೋಟೊ: ಸಂಸದರಿಗೆ ನರೇಗಾ ನೌಕರರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗ್ರಾಮೀಣಾಭಿವೃದ್ಧಿಯಲ್ಲಿ ನರೇಗಾ ಮಹತ್ತರ ಪಾತ್ರ ವಹಿಸಿದೆ. ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಹಳ್ಳಿಯಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹುಮುಖ್ಯವಾಗಿದೆ.

ಕೊಪ್ಪಳ:  ನರೇಗಾ ನೌಕರರ 5 ತಿಂಗಳ ಬಾಕಿ ವೇತನ ಪಾವತಿ, ಸೇವಾ ಭದ್ರತೆ ಹಾಗೂ ಆರೋಗ್ಯ ವಿಮೆ ನೀಡುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ನರೇಗಾದಡಿ ಕಾರ್ಯನಿರ್ವಹಿಸುತ್ತಿರುವ ನೂರಾರು ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.

ಜಿಪಂ ಎಡಿಪಿಸಿ ಮಹಾಂತಸ್ವಾಮಿ ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿ ನರೇಗಾ ಮಹತ್ತರ ಪಾತ್ರ ವಹಿಸಿದೆ. ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಹಳ್ಳಿಯಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹುಮುಖ್ಯವಾಗಿದೆ. ಆದರೆ, ಅವರಿಗೆ ಸರಿಯಾಗಿ ವೇತನ ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳ ಶಾಲಾ ದಾಖಲಾತಿ, ಕುಟುಂಬದ ನಿರ್ವಹಣೆ, ಕೌಟುಂಬಿಕ ಆರೋಗ್ಯ ಸಮಸ್ಯೆಗೆ ವೇತನ ಪಾವತಿಯಾಗದೆ ಸಮಸ್ಯೆಯಾಗಿದೆ. ನರೇಗಾದಡಿ ಜಿಲ್ಲಾ ಹಂತದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಡಿಎಎಂ, ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಗ್ರಾಮ ಕಾಯಕ ಮಿತ್ರರು, ಬಿಎಫ್‌ಟಿ ಸೇರಿ ವಿವಿಧ ಹುದ್ದೆ ಸೇರಿದಂತೆ 250ಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸಿಬ್ಬಂದಿಗೆ ಕಳೆದ 5 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ತಿಳಿಸಿದರು.

ಜೀವನ ಭದ್ರತೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವ ನರೇಗಾ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ, ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿದರು.

ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೊಟ್ರೇಶ ಜವಳಿ ಮಾತನಾಡಿ, ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆ ಈಡೇರಿಸುವ ಜತೆಗೆ ವೇತನ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬೇರ್ ಫೂಟ್ ಟೆಕ್ನಿಷಿಯನ್‌ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಎಂ., ಹಾಗೂ ಗ್ರಾಮ ಕಾಯಕ ಮಿತ್ರ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ವಾತಿ ಮಾಲಿಪಾಟೀಲ್ ಮಾತನಾಡಿ, ವೇತನವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಕ್ಷೇತ್ರ ಭೇಟಿ ನೀಡಲು ಸಮಸ್ಯೆಯಾಗಿದೆ. ಆದರಿಂದ ತಕ್ಷಣ ವೇತನ ಪಾವತಿಸಬೇಕೆಂದು ಒತ್ತಾಯಿಸಿದರು.

ಸಂಸದರಿಗೆ ಮನವಿ:

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಂಸದ ರಾಜಶೇಖರ ಹಿಟ್ನಾಳ ಮನವಿ ಸ್ವೀಕರಿಸಿ, ವೇತನ ಬಾಕಿ ಕುರಿತು ಆಯುಕ್ತರು ಹಾಗೂ ಕೇಂದ್ರ ಸರ್ಕಾರದ ಸಚಿವರೊಂದಿಗೆ ಮಾತನಾಡಿ ವೇತನ ಪಾವತಿಗೆ ಕ್ರಮವಹಿಸಲಾಗುವುದು. ಎಲ್ಲರಿಗೂ ತ್ವರಿತವಾಗಿ ಆರೋಗ್ಯ ವಿಮೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ನೌಕರರ ಸೇವಾ ಭದ್ರತೆಗೆ ಕಲಾಪದಲ್ಲಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಉಪವಿಭಾಗಧಿಕಾರಿ ಮಹೇಶ ಮಾಲಗಿತ್ತಿ, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ರಾಜ್ಯಾದ್ಯಂತ ಸಮಸ್ಯೆ ಉದ್ಭವವಾಗಿದೆ. ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ಚಿತ್ರಗಾರ, ಉಪಾಧ್ಯಕ್ಷ ಬಿ. ಶರಣಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಾಳಪ್ಪ ತಾಳಕೇರಿ, ಸಂಘಟನಾ ಕಾರ್ಯದರ್ಶಿ ಗುರುರಾಜ, ಖಜಾಂಚಿ ಪಂಪನಗೌಡ ಹಳೇಮನಿ, ಮೈನುದ್ದೀನ್, ವಿಜಯಲಕ್ಷ್ಮಿ, ಸಂತೋಷ ನಂದಾಪುರ, ಶರಣಬಸವ ಮಾಲಿಪಾಟೀಲ್, ಸಯ್ಯದ್ ತನ್ವಿರ್, ಲೀಲಾವತಿ, ಪ್ರಕಾಶ ಸಜ್ಜನ್, ದೇವರಾಜ ಪತ್ತಾರ, ಕವಿತಾ, ಕೊಪ್ಪಳ ಜಿಲ್ಲೆಯ 200ಕ್ಕೂ ಹೆಚ್ಚು ನರೇಗಾ ನೌಕರರು ಹಾಜರಿದ್ದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ