ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ
ಕನ್ನಡಪ್ರಭ ವಾರ್ತೆ ಕುಕನೂರು
ಶೈಕ್ಷಣಿಕ ಮೌಲ್ಯ ಕುಸಿಯದಂತೆ ಶಿಕ್ಷಕರು ಗಮನ ಹರಿಸಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜರುಗಿದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಕ್ಕಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಲಿಸಬೇಕಾದರೆ, ಕಲಿಸುವ ವಿಷಯದಲ್ಲಷ್ಟೇ ಶಿಕ್ಷಕರಿಗೆ ಪ್ರಭುತ್ವ ಇದ್ದರೆ ಸಾಲದು. ವೃತ್ತಿಗೆ ಅಗತ್ಯವಾದ ಬದ್ಧತೆ, ಮೌಲ್ಯಗಳು, ತೀವ್ರಾಸಕ್ತಿ ಇರಬೇಕು. ಮಕ್ಕಳ ಸಮಗ್ರ ವ್ಯಕ್ತಿತ್ವದ ವಿಕಾಸಕ್ಕಾಗಿ ಸದಾ ತುಡಿಯುವ ಶಿಕ್ಷಕರು ಹಾಗೂ ಪರಿಣಾಮಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗೆ ಚಾಲನೆ ನೀಡಬೇಕಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ದೇವಯ್ಯ ಮಾತನಾಡಿ, ಶಿಕ್ಷಣ ಕ್ಷೇತ್ರ ಸತ್ವಶಾಲಿ ಆಗುವುದು ಗುಣಮಟ್ಟದ ಶಿಕ್ಷಕರಿಂದ ಮಾತ್ರ. ಅಂತಹ ಶಿಕ್ಷಕರನ್ನು ನಿರ್ಮಿಸಬೇಕಾದರೆ ಅತ್ಯುತ್ತಮವಾದ ಶಿಕ್ಷಕರ ಶಿಕ್ಷಣ ವ್ಯವಸ್ಥೆ ಇರಬೇಕು. ಶಿಕ್ಷಕರಲ್ಲಿ ಬೋಧನಾ ಕೌಶಲ, ಕಲಿಕಾ-ಬೋಧನಾ ಕ್ರಮದ ಸಿದ್ಧಾಂತ ಹಾಗೂ ವೃತ್ತಿಪರ ಕೌಶಲ ವೃದ್ಧಿಯ ನಡುವೆ ಕೇಂದ್ರೀಕೃತವಾಗಿದೆ. ಶಿಕ್ಷಕರ ಶಿಕ್ಷಣವು ಚಲನಶೀಲವಾದ ಮತ್ತು ನಿರಂತರವಾಗಿ ವಿಕಸನಗೊಳ್ಳುವ ಕ್ಷೇತ್ರ ಎಂದರು.ಮಕ್ಕಳು ತಮ್ಮ ಬದುಕಿನ ಮೊದಲ ಪಾಠಗಳನ್ನು ಕಲಿಯುವುದು ತರಗತಿ ಕೋಣೆಯಲ್ಲಿ. ಹೀಗಾಗಿ ಶಿಕ್ಷಕರ ಮೇಲೆ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಹೊಣೆ ಇರುತ್ತದೆ. ಉತ್ತಮ ಶಿಕ್ಷಕರಿಲ್ಲದೇ ಹೋದಲ್ಲಿ ಶಾಲೆಯ ಭವ್ಯ ಕಟ್ಟಡಕ್ಕಾಗಲಿ ಅಥವಾ ಅಲ್ಲಿನ ಮೂಲ ಸೌಕರ್ಯಗಳಿಗಾಗಲಿ ಬೆಲೆ ಇರುವುದಿಲ್ಲ. ಮಕ್ಕಳ ಕಲಿಕೆಗೆ ಒತ್ತಡ ಹೇರದೆ ಅವರದೇ ವೇಗದಲ್ಲಿ ಕಲಿಯುವಂತೆ ಮಾಡುವುದು, ಪರಿಣಾಮಕಾರಿ ಮೌಲ್ಯಮಾಪನ, ನಿರಂತರ ಮೇಲುಸ್ತುವಾರಿಯ ಬೋಧನಾ- ಕಲಿಕಾ ವ್ಯವಸ್ಥೆ, ಬಲವಾದ ಶಾಲಾ ನಾಯಕತ್ವ, ಪೋಷಕರು ಹಾಗೂ ಸಮುದಾಯದ ಗರಿಷ್ಠ ಭಾಗವಹಿಸುವಿಕೆ, ಕಂಪ್ಯೂಟರ್ ಆಧಾರಿತ ಕಲಿಕೆಗಳನ್ನು ಹೊಂದಿರುವುದೂ ಪರಿಣಾಮಕಾರಿ ಶಾಲೆಯ ಲಕ್ಷಣಗಳಾಗಿವೆ ಎಂದರು.
ಮಕ್ಕಳು ಉತ್ತಮವಾಗಿ ಕಲಿತೇ ಕಲಿಯುತ್ತಾರೆಂಬ ಆಶಾಭಾವನೆ ಶಿಕ್ಷಕರಲ್ಲಿದ್ದರೆ ಅದು ಉತ್ತಮ ಕಲಿಕೆಗೆ ನೆರವಾಗುತ್ತದೆ. ಇದಕ್ಕೆ ಬದಲಾಗಿ, ತನ್ನ ವಿದ್ಯಾರ್ಥಿಗಳು ಬುದ್ಧಿವಂತರಲ್ಲ, ಅವರು ಉತ್ತಮವಾಗಿ ಕಲಿಯುವಂತೆ ಮಾಡುವುದು ಕಠಿಣ ಎಂಬ ಮನೋಧೋರಣೆ ಶಿಕ್ಷಕರಿಗೆ ಇದ್ದಲ್ಲಿ, ಆ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಅಸಾಧ್ಯ ಎಂಬುದು ಸಂಶೋಧನೆಗಳ ಸಾರ ಎಂದರು.ಸಂಸ್ಥೆಯ ಅಧ್ಯಕ್ಷ ಜಸ್ವಂತ್ ಜೈನ್, ನಾರಾಯಣಪ್ಪ ಹರಪನಹಳ್ಳಿ, ಬಸವರಾಜ್ ಉಳ್ಳಾಗಡ್ಡಿ, ವೀರಯ್ಯ ಉಳ್ಳಾಗಡ್ಡಿ, ಸಂಗಣ್ಣ ಟೆಂಗಿನಕಾಯಿ, ಕೊಟ್ರಪ್ಪ ತೋಟದ ಇದ್ದರು.