ಕ್ಯಾನ್ಸರ್ ಜಾಗೃತಿ ಅಭಿಯಾನದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಸಲಹೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಎಲ್ಲ ರಂಗದಲ್ಲಿ ಗುರುತಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿಯಾದರೂ ಶೋಷಣೆಗೆ ಒಳಗಾಗುತ್ತಿದ್ದಾಳೆ. ಮನೆ ಜವಾಬ್ದಾರಿ ಜೊತೆ ಆಕೆ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ಮುರುಘಾಮಠದ ಅನುಭವ ಮಂಟಪದ ಸೋಮವಾರ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರ ಸಂಘ ಸಹಯೋಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗೆ ಕ್ಯಾನ್ಸರ್ ಜಾಗೃತಿ ಅಭಿಯಾನ ಹಾಗೂ ಮುಂಜಾಗ್ರತ ಕಾರ್ಯಕ್ರಮಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆ ಒತ್ತಡಕ್ಕೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾಳೆ. ಮಹಿಳೆಯರ ಸಮರ್ಪಣಾ ಭಾವ ದೊಡ್ಡದು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಅರ್ಥಪೂರ್ಣವಾದ ಕೆಲಸ ಎಂದರು.
ಅನೇಕ ಸಾಮಾಜಿಕ ಜವಾಬ್ದಾರಿಯನ್ನು ಶ್ರೀಮಠ ಮಾಡುತ್ತಿದೆ. 25ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಆಸ್ಪತ್ರೆಯ ಅವಶ್ಯಕತೆಯಿತ್ತು. ಅದನ್ನು ಈಡೇರಿಸಲಾಗಿದೆ. ಸದ್ಯ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಉಚಿತವಾಗಿ ಹೆರಿಗೆ, ಔಷೊಧೋಪಚಾರ, ತಪಾಸಣೆ ಮಾಡಲಾಗುತ್ತದೆ. ನಮ್ಮ ಸಂಸ್ಥೆ ಬಡವರ, ಮಧ್ಯಮ ವರ್ಗದವರ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ ಎಂದರು.ಜಿಲ್ಲಾ ಸರ್ಜನ್ ಡಾ.ರವೀಂದ್ರ ಮಾತನಾಡಿ, ಆಶಾ ಕಾರ್ಯಕರ್ತರಿಗೆ ಅನೇಕ ಜವಾಬ್ದಾರಿಗಳಿರುತ್ತವೆ. ಸ್ವಚ್ಛತೆ ಬಗ್ಗೆ ನಿಮಗೆ ಅರಿವು ಇರುತ್ತದೆ. ನೀವು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಭೆ ಸಮಾರಂಭಗಳಲ್ಲಿ ತಾವು ಕಲಿತದ್ದನ್ನು ತಿಳಿಹೇಳಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿ ಮಠ ಮಾತನಾಡಿ, ಪ್ರತಿ ಮನೆಗೆ ಜಿಲ್ಲೆಯಾದ್ಯಂತ ಭೇಟಿ ಮಾಡಿ ರಕ್ತದೊತ್ತಡ, ಸಕ್ಕರೆಕಾಯಿಲೆ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲು ಪ್ರಾರಂಭಿಸಿದ್ದೇವೆ. ಸ್ತನ, ಗರ್ಭ ಮತ್ತು ಬಾಯಿ ಗಂಟಲು ಕ್ಯಾನ್ಸರ್ ಗಳು ಮಹಿಳೆಯ ಬಾದಿಸುತ್ತಿವೆ. ಜನರ ಹತ್ತಿರ ಹೋಗಿ ಆರೋಗ್ಯ ವಿಚಾರಿಸಿ ಕ್ಯಾನ್ಸರ್ ರೋಗ ಲಕ್ಷಣಗಳು ಇದ್ದರೆ ಆಪರೇಷನ್ ಮಾಡಲಾಗುತ್ತದೆ ಎಂದರು.ಈ ಮೊದಲು ಶಿವಮೊಗ್ಗ, ದಾವಣಗೆರೆಯಲ್ಲಿ ಮಾತ್ರ ಇತ್ತು. ಇನ್ನೆರಡು ತಿಂಗಳಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ಆಸ್ಪತ್ರೆ (ಚಿಕಿತ್ಸಾ ಘಟಕ) ಬರುತ್ತಿದೆ. ಅದು ಸುಸಜ್ಜಿತವಾಗಿರುತ್ತದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈಗಾಗಲೇ ಪ್ರತಿ ಹಳ್ಳಿಗೆ ಸಕ್ಕರೆ ಕಾಯಿಲೆ, ಬಿ.ಪಿ ಮಾತ್ರೆಗಳನ್ನು ಕಳುಹಿಸಿದ್ದೇವೆ. ಮಹಿಳೆಯರ ಕ್ಯಾನ್ಸರ್ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟದ ಕೆಲಸ. ದೂರದ ಊರುಗಳಿಗೆ ಆಶಾ ಕಾರ್ಯಕರ್ತೆಯರು ಹೋಗಿ ಸಂಬಂಧಿಸಿದ ರೋಗಿಯನ್ನು ಗುಣಮುಖಪಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಾಲೇಜಿನ ಡೀನ್ ಡಾ. ಜಿ. ಪ್ರಶಾಂತ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಹೆರಿಗೆ ಮತ್ತು ಆಪರೇಷನ್ ಮಾಡಲಾಗುತ್ತಿದೆ. ಮೆಮೋಗ್ರಫಿ ಕೂಡ ಇದೆ. ಯಾವುದೇ ರೀತಿಯ ಕ್ಯಾನ್ಸರ್ ಇರಲಿ ಮೊದಲ ಹಂತದಲ್ಲಿ ಪತ್ತೆಯಾದರೆ ಅದನ್ನು ಗುಣಪಡಿಸಬಹುದು. ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡರೆ ಬೇಗ ಗುಣಮುಖವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಡಾ.ಭಾರತಿ, ಡಾ.ಅಭಿನವ್, ಡಾ.ರಾಜೇಶ್, ಡಾ. ಪಾಲಾಕ್ಷಪ್ಪ ಮಾತನಾಡಿದರು. ಡಾ.ನಾರಾಯಣಮೂರ್ತಿ, ಡಾ.ಗೀತಾ ಪಾಲಾಕ್ಷಪ್ಪ, ಡಾ.ಹರ್ಷಿತ, ಡಾ. ಲತಾ, ಡಾ.ಸೌಮ್ಯ ಇದ್ದರು.