ಹುಬ್ಬಳ್ಳಿ:
ರಾಜ್ಯದಲ್ಲಿ ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಗೆ ಧಾರವಾಡ ಜಿಲ್ಲೆಯಲ್ಲಿ 23 ಕೇಂದ್ರ ತೆರೆಯಲಾಗಿತ್ತು. ಅದರಲ್ಲಿ ಬ್ಯಾಹಟ್ಟಿ ಖರೀದಿ ಕೇಂದ್ರದಲ್ಲಿ 95 ರೈತರಿಂದ 1981 ಚೀಲ ಹೆಸರು (990.5 ಕ್ವಿಂಟಲ್) ಖರೀದಿಸಿದ್ದು ₹ 86,84,704 ಪಾವತಿಸಬೇಕಿತ್ತು. ರೈತರಿಂದ ಖರೀದಿಸಿದ ಹೆಸರನ್ನು ನರಗುಂದ ಗೋದಾಮಿಗೂ ಕಳುಹಿಸಲಾಗಿತ್ತು. ಅಲ್ಲಿ ಬರೋಬ್ಬರಿ 1 ತಿಂಗಳ ಬಳಿಕ ಹೆಸರು ಗುಣಮಟ್ಟ ಸರಿಯಿಲ್ಲ ಎಂದು ತಿಳಿಸಿ ತಿರಸ್ಕರಿಸಲಾಗಿತ್ತು. ಗುಣಮಟ್ಟ ಸರಿಯಿಲ್ಲದಿದ್ದರೆ ಅದ್ಹೇಗೆ ಖರೀದಿಸಿದ್ದರು? ಖರೀದಿಸುವಾಗ ಗುಣಮಟ್ಟ ಪರಿಶೀಲನೆ ಮಾಡಲಿಲ್ಲವೇ? ಎಂದು ರೈತರು ಪ್ರಶ್ನಿಸಿದ್ದರು. ಜತೆಗೆ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಅತ್ತ ದುಡ್ಡು ಬಂದಿಲ್ಲ; ಇತ್ತ ಹೆಸರು ಒಂದು ತಿಂಗಳ ಆದ ಮೇಲೆ ಗುಣಮಟ್ಟ ಇಲ್ಲವೆಂದರೆ ಹೇಗೆ ಎಂದು ಗೊಂದಲಕ್ಕೊಳಗಾಗಿ ರೈತರು ಕಂಗಾಲಾಗಿದ್ದರು.
ಈ ಸಂಬಂಧ "ಕನ್ನಡಪ್ರಭ " ಸರಣಿ ವರದಿ ಬರೆದು ಸರ್ಕಾರದ ಗಮನ ಸೆಳೆದಿತ್ತು. ಆಗ ಎಚ್ಚೆತ್ತ ಜಿಲ್ಲಾಡಳಿತ ಇದರ ತನಿಖೆಗೆ ಆದೇಶಿಸಿತು. ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕರು ತನಿಖೆ ನಡೆಸಿ ಬೆಂಬಲ ಬೆಲೆ ಖರೀದಿ ಕೇಂದ್ರದ ಸಿಬ್ಬಂದಿಯೇ ತಪ್ಪು ಎಸಗಿದ್ದಾರೆ. ತಕ್ಷಣವೇ ರೈತರಿಗೆ ಹಣ ಪಾವತಿಸುವಂತೆ ಸೂಚಿಸಬೇಕೆಂದು ಜಿಲ್ಲಾಡಳಿತಕ್ಕೆ ವರದಿಯನ್ನೂ ಸಲ್ಲಿಸಿದ್ದರು.ಈ ವರದಿ ಕೊಟ್ಟು ನಾಲ್ಕೈದು ತಿಂಗಳಾಗಿದೆ. ಆದರೆ, ಈ ವರೆಗೂ ರೈತರಿಗೆ ದುಡ್ಡು ಬಂದಿಲ್ಲ. ತಕ್ಷಣವೇ ರೈತರಿಗೆ ಹೆಸರು ಖರೀದಿಯ ದುಡ್ಡು ಕೊಡಬೇಕೆಂದು ಆಗ್ರಹಿಸಿ ಇದೀಗ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ತಹಸೀಲ್ದಾರ್ ಮಹೇಶ ಗಸ್ತೆ ಮಾತನಾಡಿ, ಜಿಲ್ಲಾಧಿಕಾರಿಗಳು ಎಸ್‌ಐಆರ್ ಕಾರ್ಯಗಳಲ್ಲಿ ನಿರತರಾಗಿದ್ದು, ಅವರೊಂದಿಗೆ ಚರ್ಚಿಸಿ ನಿಮ್ಮನ್ನು ಭೇಟಿ ಮಾಡಿಸಲು ಸಮಯ ನಿಗದಿಗೊಳಿಸಲಾಗುವುದು. ಸದ್ಯಕ್ಕೆ ಧರಣಿ ಕೈಬಿಡಿ ಎಂದು ರೈತರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸದ ರೈತರು ನಮಗೆ ಪರಿಹಾರ ಬರುವ ವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಮುಂದುವರಿಸಿದರು.
ಅಡುಗೆಯನ್ನು ಆವರಣದಲ್ಲೇ ಸಿದ್ಧಪಡಿಸಿ, ಊಟ ಮಾಡಿ ಧರಣಿ ಮುಂದುವರಿಸಿದ್ದಾರೆ. ಇನ್ನು ರಾತ್ರಿಯಿಡೀ ಧರಣಿಯಲ್ಲಿ ಪಾಲ್ಗೊಂಡಿದ್ದ ರೈತರು, ಆಗಾಗ ತೂಕಡಿಸುತ್ತಾ ಕುಳಿತ್ತಿದ್ದ ದೃಶ್ಯ ಕಂಡು ಬಂತು. ಈ ನಡುವೆ ಸೊಳ್ಳೆಗಳ ಕಾಟ ನಿವಾರಣೆಗೆ ಬೇವಿನ ಗಿಡದ ಎಲೆಗಳಿಗೆ ಬೆಂಕಿ ಹಚ್ಚಿಕೊಂಡು ಧರಣಿಯಲ್ಲಿ ಪಾಲ್ಗೊಂಡಿದ್ದರು. ಬ್ಯಾಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಖರೀದಿ ವೇಳೆ ತಪ್ಪು ಮಾಡಿದೆ. ತಪ್ಪಾಗಿರುವುದಂತೂ ಸತ್ಯ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು.