ಮುಂಡಗೋಡ: ಪಟ್ಟಣದ ವಾರದ ಸಂತೆ ಮಾರುಕಟ್ಟೆ ಹರಾಜಿನಲ್ಲಿ ಗುತ್ತಿಗೆ ಪಡೆದವರಿಂದ ತಕ್ಷಣ ಶೇ.೨೫ರಷ್ಟು ಮುಂಗಡ ಹಣ ಪಾವತಿಸಿಕೊಳ್ಳಬೇಕು ಅಥವಾ ಮರು ಟೆಂಡರ್ ಕರೆಯಬೇಕೆಂದು ಪಪಂ ಸದಸ್ಯರು ಒತ್ತಾಯಿಸಿದರು.
ತಕ್ಷಣ ಹಣವನ್ನು ಕಟ್ಟಿಸಿಕೊಳ್ಳಬೇಕು. ಇದರಲ್ಲಿ ವಿನಾಯಿತಿ ನೀಡುವುದಾದರೆ ಮರು ಟೆಂಡರ್ ಕರೆದು ಹರಾಜು ನಡೆಸುವಂತೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ಬಹುತೇಕ ಬಡಾವಣೆಗಳ ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಕೊಳಚೆ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಹಿಂದೆ ಸ್ವಚ್ಛತೆ ಹೊಂದಿದ ಪಟ್ಟಣ ಎಂಬ ಪ್ರಶಸ್ತಿ ಪಡೆದ ಮುಂಡಗೋಡ ಈಗ ಕೊಳಚೆ ಪಟ್ಟಣ ಪ್ರಶಸ್ತಿಗೆ ಭಾಜನವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರದ ಸ್ವಚ್ಛತೆ ಬಗ್ಗೆ ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ ಪಪಂ ಸದಸ್ಯ ವಿಶ್ವನಾಥ ಪವಾಡಶೆಟ್ಟರ, ತಕ್ಷಣ ಸ್ವಚ್ಛತೆ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದರು.ಕಂಪ್ಯೂಟರ್ ಕ್ವಾಟ್ರೇಜ್ ರಿಪೇರಿಗೆ ₹೨೦ ಸಾವಿರ ಕರ್ಚು ಹಾಕಲಾಗಿದೆ. ಅಷ್ಟು ಹಣದಲ್ಲಿ ಹೊಸ ಕಂಪ್ಯೂಟರ್ ಖರೀದಿಸಬಹುದಿತ್ತು. ಈ ಬಗ್ಗೆ ತನಿಖೆ ನಡೆಸಬೇಕೆಂದು ವಿಶ್ವನಾಥ ಪವಾಡಶೆಟ್ಟರ ಆಗ್ರಹಿಸಿದರು.
೨೦೧೬-೧೭ರ ನಂತರ ಪಟ್ಟಣ ವ್ಯಾಪ್ತಿಯ ಕೆರೆಗಳನ್ನು ಮೀನು ಸಾಕಾಣಿಕೆಗೆ ಹರಾಜು ಕರೆಯಲಾಗಿಲ್ಲ. ಹಳಬರನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಕೆರೆಗಳನ್ನು ಹೊಸದಾಗಿ ಹರಾಜು ಕರೆಯಬೇಕೆಂದು ಕೆಲ ಸದಸ್ಯರು ಒತ್ತಾಯಿಸಿದರು.
ಮಳೆಗಾಲ ಬಂದರೆ ಪಟ್ಟಣದ ಮನಾರಿಕಾಂಬಾ ನಗರ ಸಂಪೂರ್ಣ ನೀರು ನಿಂತು ಕೆರೆಯಂತಾಗುತ್ತದೆ. ಈ ನೀರು ಸರಾಗವಾಗಿ ಬೇರೆಡೆ ಹರಿದುಹೋಗುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯೆ ಬೀಬಿಜಾನ ಮುಲ್ಲಾನವರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಶ್ರೀಕಾಂತ ಸಾನು, ಫಣಿರಾಜ ಹದಳಗಿ, ಅಶೋಕ ಚಲವಾದಿ, ಮಹ್ಮದಗೌಸ ಮಖಾಂದಾರ, ರಜಾ ಪಠಾಣ, ಮಂಜುನಾಥ ಹರ‍್ಮಲಕರ, ಶೇಖರ ಲಮಾಣಿ, ನಿರ್ಮಲಾ ಬೆಂಡ್ಲಗಟ್ಟಿ, ಕುಸುಮಾ ಹಾವಣಗಿ, ಶಕುಂತಲಾ ನಾಯಕ, ಸುವರ್ಣ ಕೊಟಗೊಣಸಿ, ಜೈನು ಬೆಂಡಿಗೇರಿ, ಎಂಜಿನಿಯರ್ ಗಣೇಶ ಭಟ್ ಮುಂತಾದವರು ಉಪಸ್ಥಿತರಿದ್ದರು.