ಕನ್ನಡಪ್ರಭ ವಾರ್ತೆ ವಿಜಯಪುರ
ಇಡೀ ದೇಶದ ಗಮನ ಸೆಳೆದಿದ್ದ ಕೊಳವೆ ಬಾವಿಯಲ್ಲಿ ಬಾಲಕ ಬಿದ್ದಿದ್ದ ಘಟನೆ ಯಾರೂ ಮರೆಯುವಂತಿಲ್ಲ. ದುರ್ಘಟನೆಯಲ್ಲಿ ಬಾಲಕನ ರಕ್ಷಣೆಗೆ ಬಳಸಲಾಗಿದ್ದ ಯಂತ್ರೋಪಕರಣಗಳ ಬಿಲ್ ಬಾಕಿ ಉಳಿಸಿಕೊಳ್ಳುವ ಮೂಲಕ ಜಿಲ್ಲಾಡಳಿತ ಮತ್ತೊಂದು ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುರಿತು ನಾಡಿನ ಹೆಮ್ಮೆಯ ದಿನಪತ್ರಿಕೆ ಕನ್ನಡಪ್ರಭ 2024 ಆಗಸ್ಟ್ 29ರಂದು ಪಾವತಿಯಾಗದ ಸಾತ್ವಿಕ ರಕ್ಷಿಸಿದ ಯಂತ್ರಗಳ ಬಿಲ್ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ್ದ ಇಂಡಿ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಟಿ.ಬೂಬಾಲನ್ ಅವರು ಆದಷ್ಟು ಬೇಗ ಬಿಲ್ ಪಾವತಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಬಾಕಿ ಉಳಿದಿರುವ ಬಿಲ್ ತರಿಸಿಕೊಂಡು, ಸ್ವತಃ ಮುತುವರ್ಜಿ ವಹಿಸಿದ ಜಿಲ್ಲಾಧಿಕಾರಿಗಳು ಬಿಲ್ ಮೊತ್ತವನ್ನು ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ. ಕೊಳವೆಬಾವಿಯಲ್ಲಿ ಬಿದ್ದಿದ್ದ ಮಗುವಿನ ರಕ್ಷಣೆಗೆ ಮಾನವೀಯತೆಯ ಆಧಾರದ ಮೇಲೆ ಯಂತ್ರೋಪಕರಣ ತಂದು ಕೆಲಸ ನಿರ್ವಹಿಸಿದ್ದವರು ಅನುಭವಿಸಿದ್ದ ಸಂಕಷ್ಟದ ಪರವಾಗಿ ಕನ್ನಡಪ್ರಭ ವರದಿಗೆ ಇದೀಗ ಫಲ ಸಿಕ್ಕಿದೆ. ಕನ್ನಡಪ್ರಭದ ಫಾಲೋಅಪ್ ವರದಿಯಿಂದಾಗಿ ಬಾಕಿ ಬಿಲ್ ಪಾವತಿಯಾಗಿದ್ದು, ಕನ್ನಡಪ್ರಭ ಹೊಂದಿದ ಸಾಮಾಜಿಕ ಕಳಕಳಿಗೆ ಇದು ಸಾಕ್ಷಿಯಾಗಿದೆ.ಘಟನೆ ವಿವರ..
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ 2024 ಏಪ್ರಿಲ್ 3ರಂದು ಸಾತ್ವಿಕ ಎಂಬ ಎರಡು ವರ್ಷದ ಮಗು ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿತ್ತು. ಈ ವೇಳೆ ನಿರಂತರವಾಗಿ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಶ್ರಮ ವಹಿಸಿ ಮಗುವನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮಗು ರಕ್ಷಣೆ ವೇಳೆ ಜೆಸಿಬಿ, ಹಿಟ್ಯಾಚಿ, ಸ್ಟೋನ್ ಕಟರ್, ಡ್ರಿಲ್ಲರ್, ಟ್ರ್ಯಾಕ್ಟರ್, ಟಿಪ್ಪರ್ ಸೇರಿದಂತೆ ಹಲವು ಯಂತ್ರಗಳನ್ನು ಬಳಸಿ ನೆಲ ಅಗೆದಿದ್ದವರಿಗೆ ₹ 4 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಇದೀಗ ಬಿಲ್ ಪಾವತಿ ಮಾಡಿದ್ದಾರೆ.ಕನ್ನಡಪ್ರಭ ಫಾಲೋಅಪ್:
ಏಪ್ರಿಲ್ 3ರಂದು ಸಾತ್ವಿಕ ಕೊಳವೆಬಾಗಿಗೆ ಬೀಳುತ್ತಿದ್ದಂತೆ ನಿರಂತರವಾಗಿ ಮೂರು ದಿನಗಳ ಕಾಲ ವರದಿ ಪ್ರಕಟಿಸಿದ್ದ ಕನ್ನಡಪ್ರಭ ನಂತರದಲ್ಲಿ ಫಾಲೋಅಪ್ ಮಾಡಿತ್ತು. ಬಳಿಕ ಆಗಸ್ಟ್ 29ರಂದು ಸಹ ಬಾಕಿಯಾಗದ ಬಿಲ್ ಕುರಿತು ಫಾಲೋಸಪ್ ವರದಿ ಪ್ರಕಟಿಸಿತ್ತು. ಡಿಸೆಂಬರ್ 30ರಂದು ವಾರ್ಷಿಕ ಹಿನ್ನೋಟದಲ್ಲಿ ಈ ಕುರಿತು ಉಲ್ಲೇಖಿಸಿದ್ದ ಕನ್ನಡಪ್ರಭ. ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಬಿಲ್ ಪಾವತಿ ಕುರಿತು ನೆನಪಿಸಿತ್ತು. ಇದೆಲ್ಲದರ ಪರಿಣಾಮ ಇದೀಗ ಬಿಲ್ ಪಾವತಿಯಾಗಿದ್ದು, ಕನ್ನಡಪ್ರಭ ಪ್ರತಿಕೆಯ ಶ್ರಮಕ್ಕೆ ಬೆಲೆ ಸಿಕ್ಕಿದೆ.--------ಕೋಟ್:
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ವರ್ಷ ಏಪ್ರಿಲ್ 3ರಂದು ಕೊಳವೆ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ಮಗುವಿನ ರಕ್ಷಣಾ ಕಾರ್ಯಾಚರಣೆಗಾಗಿ ಬಳಸಲಾದ ಯಂತ್ರೋಪಕರಣ ಸೇವೆ ನೀಡಿದ ಪಿ.ಡಬ್ಲೂಡಿ 1ನೇ ದರ್ಜೆಯ ಗುತ್ತಿಗೆದಾರ ರಾಜಶೇಖರ ಚೋರಗಿ ಅವರಿಗೆ ಯಂತ್ರೋಪಕರಣ ಬಳಕೆ ಬಿಲ್ ಮೊತ್ತ ₹ 4.36 ಲಕ್ಷ ಗ್ರಾಮ ಪಂಚಾಯತಿಯಿಂದ ಪಾವತಿಸಲಾಗಿದೆ..ಟಿ.ಭೂಬಾಲನ್, ಜಿಲ್ಲಾಧಿಕಾರಿ.
ಕೋಟ್:ಮಗು ರಕ್ಷಣೆಗಾಗಿ ಕೊಳವೆಬಾವಿ ಅಗೆದು ಮಗು ರಕ್ಷಿಸಿದ್ದ ಬಿಲ್ ಕಳೆದ 11 ತಿಂಗಳಿನಿಂದ ಬಾಕಿ ಉಳಿದಿದ್ದು, ಇದೀಗ ಪಾವತಿಯಾಗಿದೆ. ಬಡವರಾಗಿದ್ದ ನಮಗೆ ಬಿಲ್ ಪಾವತಿಸುವಷ್ಟು ಶಕ್ತಿ ಇರಲಿಲ್ಲ. ಸಂಕಷ್ಟದಲ್ಲಿ ಸಕಾಲಕ್ಕೆ ಬಂದು ಯಂತ್ರಗಳನ್ನು ಪೂರೈಸಿದ್ದ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಬಿಲ್ ಪಾವತಿಸಿದ್ದು ಸಂತಸವಾಗಿದೆ.
ಸಂಗಮೇಶ ಮುಜಗೊಂಡ, ಸಂಬಂಧಿ