ಹುಬ್ಬಳ್ಳಿ: ದಲಿತ ಕುಟುಂಬದ ದೌರ್ಜನ್ಯ ಮತ್ತು ಗರ್ಭಿಣಿ ಹತ್ಯೆ ಅಮಾನವೀಯ ಕೃತ್ಯದಿಂದ ರಾಜ್ಯದ ಗಮನ ಸೆಳೆದಿದ್ದ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಭಾನುವಾರ ಜಿಲಾಡಳಿತ, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮದ ಸರ್ವ ಜನಾಂಗದ ಶಾಂತಿ ಮತ್ತು ಸೌಹಾರ್ದ ಸಭೆ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಮುಖಂಡರು, ಆರೋಪಿಗಳಿಗೆ ಒಂದು ವರ್ಷದೊಳಗಾಗಿ ಕಠಿಣ ಶಿಕ್ಷೆಯಾಗಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಕೊಲೆ ಮತ್ತು ದೌರ್ಜನ್ಯ ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು, ಆರ್ಥಿಕ ಸಹಾಯ ಹಾಗೂ ಜೀವನೋಪಾಯದ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಿ, ಕ್ರಮವಹಿಸಲಿದೆ. ಪ್ರಕರಣದ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಲು ಗ್ರಾಮಸ್ಥರ, ಮುಖಂಡರ, ವಿವಿಧ ಸಮುದಾಯ ಪ್ರತಿನಿಧಿಗಳ ತುರ್ತು ಸಭೆ ಕರೆಯಲಾಗಿದೆ. ಈ ಸಭೆಗೆ ಪರಿಶಿಷ್ಟ ಜಾತಿಯ ಜನಾಂಗದ ಪ್ರಮುಖ ಮುಖಂಡರನ್ನು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಚರ್ಚಿಸಲಾಗಿದೆ. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಮತ್ತು ಜಿಲ್ಲಾಡಳಿತ ಸಂತ್ರಸ್ತ ಕುಟುಂಬಕ್ಕೆ ಯಾವುದೇ ರೀತಿಯ ಭಯ ಅಥವಾ ತೊಂದರೆಯಾಗದಂತೆ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದರು.ಘಟನೆಯ ಆಘಾತದಿಂದ ಹೊರಬರಲಾಗದ ಸಂತ್ರಸ್ತ ಕುಟುಂಬ ಮತ್ತು ಗ್ರಾಮಸ್ಥರಲ್ಲಿ ಆತ್ಮವಿಶ್ವಾಸ ಮೂಡಿಸಲು ನಾವೆಲ್ಲರೂ ಮುಂದಾಗಬೇಕಿದೆ. ಸಂಕಷ್ಟಕ್ಕೀಡಾಗಿರುವ ಕುಟುಂಬಕ್ಕೆ ತಕ್ಷಣ ಸ್ಪಂದಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ. ಮನೆ ವ್ಯವಸ್ಥೆ ಮಾಡಿಕೊಡುವುದು, ಕುಟುಂಬದ ಜೀವನೋಪಾಯಕ್ಕಾಗಿ ಸರ್ಕಾರಿ ಕೆಲಸ ಅಥವಾ ಸೂಕ್ತ ಉದ್ಯೋಗ ನೀಡುವ ಬಗ್ಗೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಈ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬದವರು ಮತ್ತು ಗ್ರಾಮದ ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಮತ್ತು ಅವರಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಲು ಗ್ರಾಮಸ್ಥರ ಬೆಂಬಲ ಅತ್ಯಗತ್ಯ ಎಂದು ಅವರು ಹೇಳಿದರು.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಮಾತನಾಡಿದರು. ಡಾ. ಪ್ರಹ್ಲಾದ್ ಗೆಜ್ಜಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ ಖಾನಾಪುರ, ಪ್ರೇಮನಾಥ್ ಚಿಕ್ಕತುಂಬಳ, ಪರಮೇಶ್ ಕಾಳೆ, ಚಂದ್ರಶೇಖರ್ ಬಿ. ಯಾದಗೇರ, ಶ್ರೀಧರ್ ಕಂದಗಲ್ಲ, ಕೆಂಚಪ್ಪ ಮಲ್ಲಮ್ಮನವರ ಹಾಗೂ ಗ್ರಾಮದ ಪ್ರಮುಖರಾದ ಶಂಕರಗೌಡ ಪಾಟೀಲ, ಗುರುಸಿದ್ದಯ್ಯ ಹಿರೇಮಠ, ಲಲಿತಾ ಮಡ್ಲಿ, ಬಸವರಾಜ ವಾಲೀಕಾರ, ರೇಣುಕಾ ಹೂಯಿಲಗೋಳ, ಗ್ರಾಪಂ ಸದಸ್ಯ ಶಿವಾನಂದ ಮಣಕವಾಡ, ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ವಾಲೀಕಾರ, ಗ್ರಾಪಂ ಸದಸ್ಯ ಶಿವಾನಂದ ಮೇಕಾರ, ರಮೇಶ ಮಾದರ, ಯಲ್ಲಪ್ಪ ವಾಲಿಕಾರ, ಬಸವರಾಜ್ ವಾಲಿಕಾರ, ರಮೇಶ್ ಮಾದರ ಮಾತನಾಡಿದರು.
ಕಳೆದ ಭಾನುವಾರ ದೌರ್ಜನ್ಯಕ್ಕೆ ಒಳಗಾಗಿ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಇನಾಂವೀರಾಪುರ ಗ್ರಾಮದ ವಿವೇಕಾನಂದ ದೊಡ್ಡಮನಿ ಕುಟುಂಬಸ್ಥರನ್ನು ಗ್ರಾಮದ ಶಾಂತಿ ಸಭೆ ನಂತರ, ಸ್ವತಃ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಗ್ರಾಮದ ಪ್ರಮುಖರೊಂದಿಗೆ ಸ್ವಾಗತಿಸಿ ಧೈರ್ಯ ತುಂಬಿದರು.