ಕನ್ನಡಪ್ರಭ ವಾರ್ತೆ ಯಾದಗಿರಿ
ನೇತಾಜಿ ಸುಭಾಶ್ಚಂದ್ರ ಭೋಸ್ ಸರ್ಕಲ್, ಲಾಲ್ ಬಹಾದ್ದೂರ್ ಶಾಸ್ತ್ರಿ ಚೌಕ್, ಹೊಸಳ್ಳಿ ಕ್ರಾಸ್, ಗಂಜ್ ಏರಿಯಾ, ಮೈಲಾಪುರ ಅಗಸಿ, ಗಾಂಧಿ ಚೌಕ್ ತಹಸೀಲ್ದಾರ ಕಚೇರಿ ಮುಂಭಾಗ ಹೀಗೆ ವಿವಿಧ ದ್ವಿಚಕ್ರ ವಾಹನಗಳ ಮೇಲೆ ಸಂಚರಿಸಿದ ಅನೇಕರು, ಅಂಗಡಿ, ಹೋಟೆಲ್ ಇತರೆ ವ್ಯಾಪಾರಗಳನ್ನು ಬಂದ್ ಮಾಡಿದರು.
ಹೊಸ ಮತ್ತು ಹಳೆ ಬಸ್ ನಿಲ್ದಾಣಗಳಿಂದ ಬೇರೆ, ಬೇರೆ ಊರುಗಳಿಗೆ ತೆರಳಲು ಆಗಮಿಸಿದ ಬಸ್‌ಗಳನ್ನು ಕಡೆದು ವಾಪಸ್ ಕಳುಹಿಸಿದರು. ಇದರಿಂದ ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಕೆಳಗಿಳಿದು ವಾಪಸ್ ಮನೆಗಳಿಗೆ ತೆರಳಿದರು. ಬೇರೆ ಕಡೆಗಳಿಂದ ನಗರಕ್ಕೆ ಪ್ರವೇಶಿಸಿದ ಲಾರಿ, ಕಾರು, ವಿವಿಧ ವಾಹನಗಳನ್ನು ತಡೆದು ನಿಲ್ಲಿಸಿದರು. ಗುಂಪು, ಗುಂಪಾಗಿ ಹೊರಟ ಹೋರಾಟಗಾರರು ಇಡೀ ನಗರದ ಎಲ್ಲಡೆ ಸುತ್ತಾಡಿ ಬಂದ್ ಬಗ್ಗೆ ಪರಿಶೀಲನೆ ನಡೆಸಿದರು.ಬಂದ್‌ನಿಂದಾಗಿ ಸಾವಿರಾರು ಪ್ರಯಾಣಿಕರು ಮತ್ತು ಶಾಲಾ, ಕಾಲೇಜುಗಳಿಗೆ ಮತ್ತು ಬೇರೆ, ಬೇರೆ ಕೆಲಸಗಳಿಗೆ ತೆರಳಬೇಕಾಗಿದ್ದ ಅನೇಕರು ಪರದಾಡಿದರು. ಬಂದ್ ಹಿನ್ನಲೆಯಲ್ಲಿ ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಬೆಳಗ್ಗೆ 11ರ ಸುಮಾರಿಗೆ ಇಲ್ಲಿನ ತಹಸಿಲ್ ಕಚೇರಿ ಹತ್ತಿರ ಜಮಾಗೊಂಡ ಸಾವಿರಾರು ಜನರು ಅಲ್ಲಿಂದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದವರೆಗೆ ಪಾದಯಾತ್ರೆ ಮೂಲಕ ಆಗಮಿದರು.
ತಹಸೀಲ್ ಕಚೇರಿ ಬಳಿ ಬೆಳಗ್ಗೆ 10ರಿಂದಲೇ ಹೋರಾಟಗಾರರು ಆಗಮಿಸಿದರು. ವಿವಿಧ ಕನ್ನಡಪರ, ರೈತ ಸಂಘಟನೆಗಳು ಪದಾಧಿಕಾರಿಗಳು, ಕಾರ್ಯಕರ್ತರು ತಂಡೋಪತಂಡವಾಗಿ ಆಗಮಿಸಿದರೆ, ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮತ್ತು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ದಾಳ ನೇತೃತ್ವದಲ್ಲಿ ನೂರಾರು ಜನರು ಪ್ರತ್ಯೇಕವಾಗಿ ಮೆರವಣಿಗೆ ಮೂಲಕ ಹಲಗಿಗಳ ಸದ್ದಿನೊಂದಿಗೆ ಆಗಮಿಸಿ ಸೇರಿಕೊಂಡರು. ಕಾರು, ಜೀಪ್, ಕ್ರಷ್ಟರ್‌ಗಳಲ್ಲಿ ಜನರು ಆಗಮಿಸಿ ಭಾಗವಹಿಸಿದ್ದರು.
ಬಹಿರಂಗ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ಬಿಜೆಪಿ ಮುಖಂಡರಾದ ರಾಚಣ್ಣಗೌಡ ಮುದ್ನಾ ಳ, ಲಲಿತಾ ಅನಪುರ, ದೇವೇಂದ್ರನಾಥ ನಾದ. ಮಹೇಶರೆಡ್ಡಿ ಮುದ್ನಾಳ್, ಸಂಘಟನೆಗಳ ಮುಖಂಡರಾದ ಶರಣು ಗದ್ದುಗೆ, ಭೀಮನಾಯಕ್, ಮಲ್ಲಿಕಾರ್ಜುನ, ಜಲ್ಲಪ್ಪಗೊಳ, ಹನುಮಗೌಡ ಬೀರನಕಲ್, ಉಮೇಶ ಮುದ್ನಾಳ್, ಬಂಗಾರು ರಾಠೋಡ್, ಬೆಂಬಲ ನೀಡಿರುವ ವಕೀಲರ ಪರವಾಗಿ ಭೀಮಾಶಂಕರ ಯರಗೋಳ ಇತರರು ಮಾತನಾಡಿ, ಜಿಲ್ಲೆಯ ರೈತರಿಗೆ ನ.30ರವರೆಗೆ ನೀರು ಹರಿಸಬೇಕು. ಇಲ್ಲವಾದರೇ ರಾಜುಗೌಡ ನೇತೃತ್ವದಲ್ಲಿ ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.