ಕುಶಾಲನಗರ: ಶ್ರೀ ಕ್ಷೇತ್ರ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರೆಭಾಷಿಕ ಗೌಡ ಜನಾಂಗದವರನ್ನು ನಿಂದಿಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗೌಡ ಸಂಘಟನೆಗಳಿಂದ ಸೋಮವಾರ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ.
ಕುಶಾಲನಗರ ಗೌಡ ಯುವಕ ಸಂಘ, ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆ ಯಾವುದೇ ಸಮುದಾಯದ ವಿರುದ್ಧವಲ್ಲ, ನಮ್ಮ ಜನಾಂಗದವರನ್ನು ನಿಂದಿಸಿದ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಆಗ್ರಹಿಸುತ್ತಿದ್ದೇವೆ ಎಂದು ಕೊಡಗನ ಹರ್ಷ ಹೇಳಿದರು.
ಜನಾಂಗದ ಹಿತದೃಷ್ಟಿಯಿಂದ ಮಡಿಕೇರಿಯಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಯ ಬಳಿ ಎಲ್ಲರೂ ಸೇರಿ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು. ಈ ಪ್ರತಿಭಟನೆಗೆ ಕೊಡಗು ಗೌಡ ಸಮುದಾಯಗಳ ಒಕ್ಕೂಟ ಸೇರಿದಂತೆ, ಕೊಡಗು, ಮೈಸೂರು, ಬೆಂಗಳೂರಿನ ಎಲ್ಲಾ ಗೌಡ ಸಮಾಜಗಳು ಸಂಘಟನೆಗಳು, ಗೌಡ ಯುವ ವೇದಿಕೆ, ಮಹಿಳಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಗೌಡ ಯುವಕ ಸಂಘದ ಕಾರ್ಯದರ್ಶಿ ಕೋಡಿ ರೋಹಿತ್, ಖಜಾಂಚಿ ಪಳಂಗೋಟು ವಿನಯ್ ಕಾರ್ಯಪ್ಪ, ನಿರ್ದೇಶಕ ಆನಂದ್ ಕರಂದ್ಲಾಜೆ, ಡಾ. ಪ್ರವೀಣ್ ದೇವರಗುಂಡ ಇದ್ದರು.