- ದತ್ತ ಪಾದುಕೆ ದರ್ಶನ ಮಾಡಿದ ಮಾಲಾಧಾರಿಗಳು । ದತ್ತಪೀಠಕ್ಕೆ ಹರಿದು ಬಂದ ಭಕ್ತ ಗಣ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಂದ್ರದ್ರೋಣ ಪರ್ವತಗಳ ಶ್ರೇಣಿಯಲ್ಲಿರುವ ದತ್ತಪೀಠದಲ್ಲಿ ಶ್ರೀ ದತ್ತ ಜಯಂತಿ ಭಕ್ತಿಬಾವ ಸಂಭ್ರಮದಿಂದ ಗುರುವಾರ ಸಂಪನ್ನಗೊಂಡಿತು. ಎಲ್ಲೆಲ್ಲೂ ಮೊಳಗುತ್ತಿದ್ದ ಶ್ರೀರಾಮ, ಆಂಜನೇಯನ ಜಪ. ಕೇಸರಿ ಶಲ್ಯ ಧರಿಸಿ ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ದತ್ತಪಾದುಕೆ ದರ್ಶನ ಪಡೆಯುತ್ತಿದ್ದ ದತ್ತಮಾಲಾಧಾರಿಗಳು. ಇದು ದತ್ತಪೀಠದಲ್ಲಿ ದತ್ತ ಜಯಂತಿ ಕೊನೆ ದಿನ ಕಂಡು ಬಂದ ದೃಶ್ಯಗಳು.ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಕಾರ್ಯಕ್ರಮಕ್ಕೆ ಗುರುವಾರ ಅದ್ಧೂರಿ ತೆರೆ ಬಿದ್ದಿದೆ. 15 ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ಧನ್ಯರಾದರು. ದತ್ತಜಯಂತಿ ಅಂಗವಾಗಿ ಇಡೀ ದತ್ತಪೀಠದ ಆವರಣ ಕೇಸರಿಮಯವಾಗಿತ್ತು. ಎಲ್ಲೆಡೆಯೂ ಕೇಸರಿ ಧ್ವಜಗಳು ಹಾಗೂ ಭಾಗವಧ್ವಜಗಳು ರಾರಾಜಿ ಸುತ್ತಿದ್ದವು. ಇನ್ನು ದತ್ತ ಭಕ್ತರ ಘೋಷಣೆಗಳು ಎಲ್ಲೆಡೆಯೂ ಮಾರ್ಧನಿಸುತ್ತಿದ್ದವು. ದತ್ತ ಪಾದುಕೆ ದರ್ಶನ ಪಡೆದ ಭಕ್ತರು ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು.
ಬೆಳಗ್ಗೆ ಆರು ಗಂಟೆಯಿಂದಲೇ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕಾ ದರ್ಶನ ಪಡೆಯ ಲಾರಂಭಿ ಸಿದರು. ಬೆಳಗ್ಗೆ 11.30ವರೆಗೆ ದತ್ತಪೀಠಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಕಡಿಮೆಯಿತ್ತು. ಆದರೆ, 12 ಗಂಟೆ ಬಳಿಕ ದತ್ತ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಒಂದು ಕಿಲೋಮೀಟರ್‌ವರೆಗೂ ಸರದಿ ಸಾಲು ಕಂಡು ಬಂದಿತು.ಜೈ ಭಜರಂಗಿ, ಜೈ ಶ್ರೀರಾಮ್ ಎಂಬ ಘೋಷಣೆ ಕೂಗುತ್ತಾ ಸರದಿ ಸಾಲಿನಲ್ಲಿ ತೆರಳಿದ ಭಕ್ತರು ಗುಹೆಯೊಳಗೆ ತೆರಳಿ ದತ್ತಾತ್ರೇಯರ ಪಾದುಕೆಗಳಿಗೆ ನಮಸ್ಕರಿಸಿ, ಹಿಂದಿರುಗಿ ಅನುಸೂಯ ಗದ್ದುಗೆಗೆ ನಮಸ್ಕರಿಸಿ ತೀರ್ಥಪ್ರಸಾದ ಪಡೆದು ಹೊರಗಡೆ ಬರುವಾಗ ಮಧ್ಯದಲ್ಲಿ ದತ್ತಾತ್ರೇಯರ ಪ್ರಸಾದ ಸ್ವೀಕರಿಸಿದರು.ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯಳನಾಡು ಮಠದ ಶ್ರೀಗಳು, ಬಾಳೆಹೊನ್ನೂರು ಬೀರೂರು ಶಾಖಾ ಮಠದ ಶ್ರೀಗಳು, ಆನಂದ ಗುರೂಜಿ ಹೋಮ ಹವನದಲ್ಲಿ ಭಾಗಿಯಾಗಿದ್ದರು. ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕರಾದ ಹುಲ್ಲಹಳ್ಳಿ ಸುರೇಶ್, ವಿ. ಸುನೀಲ್‌ಕುಮಾರ್ ಅವರು ದತ್ತಾತ್ರೇಯ ಪಾದುಕೆಗಳ ದರ್ಶನ ಪಡೆದರು.--- ಬಾಕ್ಸ್ ----ದತ್ತಾತ್ರೇಯ ಹೋಮದತ್ತ ಜಯಂತಿ ಅಂಗವಾಗಿ ದತ್ತಪೀಠದ ತುಳಸಿಕಟ್ಟೆ ಬಳಿ ಶ್ರೀ ದತ್ತಾತ್ರೇಯ ಮಹಾಮಂತ್ರ ಯಾಗ, ಶ್ರೀ ರುದ್ರಹೋಮ, ಕಲಶಾಭಿಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನ, ಬ್ರಹ್ಮ ಭೋಜನ ಸೇವೆ ಸಾಂಗವಾಗಿ ನೆರವೇರಿದವು.ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಶಾಸಕ ಬೆಳ್ಳಿಪ್ರಕಾಶ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ರಂಗನಾಥ, ಸಹ ಕಾರ್ಯದರ್ಶಿ ಶ್ಯಾಮ್ ವಿ.ಗೌಡ, ಖಜಾಂಚಿ ಯೋಗೀಶ್‌ರಾಜ್ ಅರಸ್, ಭಜರಂಗದಳದ ವಿಭಾಗೀಯ ಸಂಚಾಲಕ ಸಕಲೇಶಪುರದ ರಘು, ಸೂರ್ಯನಾರಾಯಣ, ಜಿಲ್ಲಾ ಸಂಯೋಜಕ ಶಿವಕುಮಾರ್, ಹೆರೂರು ಶಶಾಂಕ್ ಸಹ ಹೋಮ ಹವನದಲ್ಲಿ ಭಾಗಿಯಾಗಿದ್ದರು.
---ಸರ್ಕಾರ ಶಾಶ್ವತವಾಗಿ ವಿವಾದ ಬಗೆಹರಿಸಲಿ - ಸಿ.ಟಿ. ರವಿಚಿಕ್ಕಮಗಳೂರು: ಸರ್ಕಾರ ಶಾಶ್ವತವಾಗಿ ದತ್ತಪೀಠ ವಿವಾದ ಬಗೆಹರಿಸಬೇಕು. ಸತ್ಯ ಎತ್ತಿ ಹಿಡಿಯಬೇಕು ಎನ್ನುವ ಉದ್ದೇಶ ಸರ್ಕಾರಕ್ಕೆ ಇದ್ದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ವಿವಾದ ಬಗ್ಗೆ ತನಿಖೆ ನಡೆಸಲಿ. ರಾಜಕಾರಣಿಗಳು ಯಾವುದೇ ನಿರ್ಣಯ ಕೈಗೊಂಡರೂ ಅಲ್ಲಿ ವಿವಾದಗಳು ಬರುತ್ತವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ದತ್ತಪಾದುಕೆ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಧೀಶರು ದತ್ತಪೀಠಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಲಿ. ನಮ್ಮ ಬಳಿ ಇರುವ ದಾಖಲೆಗಳನ್ನು ನಾವೂ ನೀಡುತ್ತೇವೆ. ಶಾಖಾದ್ರಿ ಬಳಿ ಯಾವ ದಾಖಲೆಗಳು ಇವೆಯೋ ಅವುಗಳನ್ನು ಅವರೂ ನ್ಯಾಯಾಧೀಶರಿಗೆ ನೀಡಲಿ ಎಂದರು.ಈ ದಾಖಲೆಗಳಲ್ಲದೆ ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆ ದಾಖಲೆಗಳನ್ನೂ ಪರಿಶೀಲನೆ ನಡೆಸಲಿ. ಸರ್ಕಾರವೇ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದಾಗ ದತ್ತಪೀಠದಲ್ಲಿ ದತ್ತಾತ್ರೇಯ ದೇವರು ಇದೆ. ನಾಗೇನಗಳ್ಳಿಯಲ್ಲಿ ಬಾಬಾ ಬುಡನ್ ದರ್ಗಾ ಇದೆ ಎಂದು ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲಾ ಉತ್ತರ ನೀಡಿದ್ದಾರೆ ಎಂದರೆ ಅಂಗೈ ಹುಣ್ಣಿಗೆ ಕನ್ನಡಿ ಬೇಡ. ದತ್ತಪೀಠ ಹಿಂದೂಗಳದ್ದು ಎಂದು ಪ್ರತಿಪಾದಿಸಿದರು.-4 ಕೆಸಿಕೆಎಂ 3ದತ್ತ ಜಯಂತಿ ಅಂಗವಾಗಿ ದತ್ತಪೀಠದ ತುಳಸಿಕಟ್ಟೆಯ ಬಳಿ ಶ್ರೀ ದತ್ತಾತ್ರೇಯ ಮಹಾಮಂತ್ರ ಯಾಗ, ಶ್ರೀ ರುದ್ರಹೋಮ ಸಾಂಗವಾಗಿ ನಡೆಯಿತು.