ಅಡಕೆ ದರ ಬರೋಬ್ಬರಿ ₹12 ಸಾವಿರ ಕುಸಿತ: ರೈತರು ಗಾಬರಿ

KannadaprabhaNewsNetwork |  
Published : Oct 04, 2026, 02:00 AM IST
 ಸಂಸ್ಕರಣೆ ಮಾಡಿದ ರಾಶಿ ಇಡಿ | Kannada Prabha

ಸಾರಾಂಶ

ನರಸಿಂಹರಾಜಪುರಮಲೆನಾಡು ರೈತರ ಆರ್ಥಿಕ ಬೆಳೆ ಹಾಗೂ ಜೀವನಾಡಿಯಾಗಿರುವ ಅಡಕೆಗೆ ಸದಾ ಸಂಕಷ್ಟ ಎದುರಾಗುತ್ತಲೇ ಇದೆ. ಈ ಬಾರಿ ಅಡಕೆ ರಾಶಿ ಇಡಿಗೆ ಕಳೆದ ವರ್ಷಕ್ಕಿಂತ ₹12 ಸಾವಿರ ಕುಸಿತ ಕಂಡು ಬೆಳೆಗಾರರು ಕಂಗಾಲಾಗಿದ್ದಾರೆ.

- ಮಾರುಕಟ್ಟೆಯಲ್ಲಿ ಶೇ. 40 ರಷ್ಟು ಅಡಕೆ ದಾಸ್ತಾನು । ಕ್ಷೀಣಿಸಿದ ಅಡಕೆ ಗುಣಮಟ್ಟ । ಕಳೆದ ವರ್ಷ ಮಾರದ ರೈತರಿಗೆ ಲಕ್ಷಾಂತರ ಲುಕ್ಸಾನು

ಯಡಗೆರೆ ಮಂಜುನಾಥ್

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಮಲೆನಾಡು ರೈತರ ಆರ್ಥಿಕ ಬೆಳೆ ಹಾಗೂ ಜೀವನಾಡಿಯಾಗಿರುವ ಅಡಕೆಗೆ ಸದಾ ಸಂಕಷ್ಟ ಎದುರಾಗುತ್ತಲೇ ಇದೆ. ಈ ಬಾರಿ ಅಡಕೆ ರಾಶಿ ಇಡಿಗೆ ಕಳೆದ ವರ್ಷಕ್ಕಿಂತ ₹12 ಸಾವಿರ ಕುಸಿತ ಕಂಡು ಬೆಳೆಗಾರರು ಕಂಗಾಲಾಗಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ರಾಶಿ ಇಡಿಗೆ ₹63 ರಿಂದ 65 ಸಾವಿರದವರೆಗೆ ಮಾರಾಟವಾಗಿದ್ದ ಅಡಕೆ ನಂತರದ ತಿಂಗಳಲ್ಲಿ ಧಾರಣೆ ನಿಧಾನವಾಗಿ ಇಳಿಯುತ್ತಾ ₹50- ₹55 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಆದರೆ, ಕಳೆದ 2 ತಿಂಗಳಿಂದ ಅಡಕೆ ಮತ್ತಷ್ಟು ಕುಸಿದಿದ್ದು ಪ್ರಸ್ತುತ ರಾಶಿ ಇಡಿ ₹40-₹45 ಸಾವಿರಕ್ಕೆ ಮಾತ್ರ ಮಾರಾಟವಾಗುತ್ತಿದೆ. ಕಳೆದ ವರ್ಷ ರಾಶಿ ಇಡಿ ₹50ರಿಂದ ₹55 ಸಾವಿರಕ್ಕೆ ಬಂದಾಗ ₹60 ಸಾವಿರ ಬರಲಿದೆ ಎಂದು ಹಲವಾರು ಬೆಳೆಗಾರರು ಅಡಕೆ ಮಾರಾಟ ಮಾಡದೆ ಕಾಯುತ್ತಾ ಕುಳಿತಿದ್ದರು. ಈಗ ಮಾರಿದರೆ ಲಕ್ಷಾಂತರ ನಷ್ಟವಾಗಲಿದೆ.

ಮಲೆನಾಡು ಭಾಗದ ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಅಡಕೆಗೆ ಹಳದಿ ಎಲೆ ರೋಗ ಬಂದು ಸಂಪೂರ್ಣ ನಾಶವಾಗಿದೆ. ಇದರ ಜೊತೆಗೆ ಕಳೆದ 5 ವರ್ಷದಿಂದ ಎಲೆ ಚುಕ್ಕಿ ರೋಗ ಕಾಣಿಸಿಕೊಂಡು ಗಾಯದ ಮೇಲೆ ಬರೆ ಹಾಕಿದಂತಾಗಿತ್ತು. 2011 ರಲ್ಲಿ ಅಡಕೆ ಕ್ವಿಂಟಲ್ ಗೆ ₹12 ರಿಂದ ₹18 ಸಾವಿರ ಮಾತ್ರ ಇತ್ತು. 2012 ರ ನಂತರ ಅಡಕೆಗೆ ಚಿನ್ನದ ಬೆಲೆ ಬಂದು ಬೆಳೆಗಾರರು ಸಂಭ್ರಮದಲ್ಲಿದ್ದರು. ರೈತರು ಸದ್ಯಕ್ಕೆ ಎಲ್ಲಾ ಬೆಳೆಗಳನ್ನು ಬಿಟ್ಟು ಅಡಕೆ ಬೆಳೆ ಮಾತ್ರ ನೆಚ್ಚಿಕೊಂಡಿದ್ದಾರೆ. ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿರುವ ಪಾನ್ ಮಸಾಲ ಕಂಪನಿಗಳೇ ಅಡಕೆಗೆ ಉತ್ತಮ ಧಾರಣೆ ಬರಲು ಕಾರಣವಾಗಿವೆ.

--- ಬಾಕ್ಸ್---

ದರ ಕುಸಿತಕ್ಕೆ ಕಾರಣಗಳೇನೇನು?

1. ಕಳೆದ ಅಕ್ಟೋಬರ್ ವೇಳೆಗೆ ಇಡೀ ಮಾರುಕಟ್ಟೆಯಲ್ಲಿ ಅಡಕೆ ದಾಸ್ತಾನೇ ಇರಲಿಲ್ಲ. ಹಾಗಾಗಿ ಪಾನ್ ಮಸಾಲ ಕಂಪನಿಗಳು ಡಿಮ್ಯಾಂಡ್ ಮಾಡಿ ಉತ್ತಮ ಧಾರಣೆ ನೀಡಿ ಅಡಕೆ ಖರೀದಿಸಿವೆ.

2. ಈ ವರ್ಷ ಅಡಕೆ ಗುಣಮಟ್ಟ ಕಡಿಮೆಯಾಗಿದೆ ಎಂದು ಪಾನ್ ಮಸಾಲ ಕಂಪನಿಗಳು ಧಾರಣೆ ಇಳಿಸುತ್ತಿವೆ. ರಾಶಿ ಇಡಿ ಅಡಕೆಯನ್ನು ಸರಿಯಾಗಿ ಬೇಯಿಸಿ ಒಣಗಿಸದೆ ಇರುವುದು, ರಾಶಿ ಇಡಿಗೆ ಗೊರಬಲು ಅಡಕೆ ಸಿಪ್ಪೆ ತೆಗೆದು ಬೇಯಿಸಿ ರಾಶಿ ಇಡಿಗೆ ಮಿಕ್ಸ್ ಮಾಡುವುದು, ಶಿರಸಿ, ಸಿದ್ದಾಪುರ, ಹಳೇ ಮೈಸೂರು ಭಾಗದ ಚಾಲಿ ಅಡಕೆಗೆ ಕಲರ್ ಹಾಕಿ ರಾಶಿ ಇಡಿಗೆ ಮಿಕ್ಸ್ ಮಾಡುತ್ತಿದ್ದು ಅಡಕೆ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಕಂಪನಿಗಳು ದೂರುತ್ತಿವೆ.

3. ಈ ಹಿಂದೆ ಪಾನ್ ಮಸಾಲಕ್ಕೆ ಎಕ್ಸೈಸ್‌ ಸುಂಕ ₹28 ಇತ್ತು. ಈಗ ₹40 ಕ್ಕೆ ಏರಿಸಲಾಗಿದೆ.

4. ರೈತರು, ಮಾಮ್ ಕೋಸ್, ಕ್ಯಾಂಪ್ಕೋ, ಅಡಕೆ ಮಂಡಿಗಳು, ವ್ಯಾಪಾರಿಗಳು ಸೇರಿ ಅಡಕೆ ಮಾರುಕಟ್ಟೆಯಲ್ಲಿ ಬರುವ ವಾರ್ಷಿಕ ಅಡಕೆಯಲ್ಲಿ ಶೇ. 30 ರಿಂದ 40 ರಷ್ಟು ಅಡಕೆ ದಾಸ್ತಾನು ಇದೆ. ಅಂದಾಜು 30 ಸಾವಿರ ಅಡಕೆ ಮೂಟೆ ಉಳಿದಿವೆ.

5. 50 ವರ್ಷಗಳ ಹಿಂದೆ ಮಲೆನಾಡು ಭಾಗವಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೆ ಅಡಕೆ ಸೀಮಿತವಾಗಿತ್ತು.ಈಗ ಬಯಲು ಸೀಮೆ ಜಿಲ್ಲೆಗಳಿಗೆ ಅಡಕೆ ವಿಸ್ತರಣೆಯಾಗುತ್ತಾ ರಾಜ್ಯದ 10 ಜಿಲ್ಲೆಗಳಲ್ಲಿ ಅಡಕೆ ಬೆಳೆಯ ಲಾಗುತ್ತದೆ. ಬೇಡಿಕೆಗಿಂತ ಜಾಸ್ತಿ ಅಡಕೆ ಮಾರುಕಟ್ಟೆಗೆ ಬರುತ್ತಿರುವುದು ಸಹ ಅಡಕೆ ಬೆಲೆ ಕುಸಿಯಲು ಕಾರಣ.

6. ಅಡಕೆಗೆ ಕೃತಕ ಬಣ್ಣ ಹಾಕದೆ ನೈಸರ್ಗಿಕವಾಗಿ ಸಂಸ್ಕರಣೆ ಮಾಡಬೇಕು ಎಂಬುದು ಈ ಕಂಪನಿಗಳ ಬೇಡಿಕೆ.

7. ರಾಶಿ ಇಡಿಯಲ್ಲಿ ಶೇ.30 ರಷ್ಟು ಚಿಕಣಿ ( ಕಪ್ಪು ಉಂಡೆ) ಇರಬೇಕು. ಆದರೆ, ಈಗ ತಯಾರಿಸುತ್ತಿರುವ ಅಡಕೆಯಲ್ಲಿ ಚಿಕಣಿ ಇರುವುದಿಲ್ಲ. ಇದೂ ಅಡಕೆ ಧಾರಣೆ ಇಳಿಕೆಗೆ ಕಾರಣ.

--ಕೋಟ್--

ಬೆಳೆಗಾರರು ಉತ್ತಮ ಗುಣ ಮಟ್ಟದ ಅಡಕೆ ತಯಾರಿಸಬೇಕು. ಈ ವರ್ಷ ಮಾರುಕಟ್ಟೆಯಲ್ಲಿ ಶೇ. 40 ರಷ್ಟು ಅಡಕೆ ದಾಸ್ತಾನು ಇರುವುದು ಧಾರಣೆ ಕುಸಿತಕ್ಕೆ ಮುಖ್ಯ ಕಾರಣ. ರೈತರು, ಎಪಿಎಂಸಿ, ವ್ಯಾಪಾರಿಗಳು, ಸಹಕಾರ ಸಂಸ್ಥೆಗಳಲ್ಲಿ ಅಡಕೆ ದಾಸ್ತಾನು ಇದೆ.

-ಯಡಗೆರೆ ಸುಬ್ರಮಣ್ಯ, ವೃತ್ತಿ ಪರ ನಿರ್ದೇಶಕ, ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಮಂಡಳ

--ಕೋಟ್--

ಅಡಕೆ ರಾಶಿ ಇಡಿಗೆ ಕನಿಷ್ಠ ₹50 ಸಾವಿರ ಬರಬೇಕು. ಈಗಾಗಲೇ ಕೃಷಿ ಕೂಲಿ ಕಾರ್ಮಿಕರ ಧಾರಣೆ, ಅಡಕೆಗೆ ಕೊಳೆ ಬಾರದಂತೆ ಸಿಂಪಡಿಸುವ ಬೋರ್ಡೋ ಮಿಶ್ರಣದ ಖರ್ಚು ಗಗನಕ್ಕೇರಿದೆ. ಇನ್ನಷ್ಟು ಉತ್ತಮ ಧಾರಣೆ ಬರಬಹುದು ಎಂದು ಬಹುತೇಕ ಅಡಕೆ ಬೆಳೆಗಾರರು ದಾಸ್ತಾನು ಮಾಡಿದ್ದಾರೆ. ರೈತರು ಅಡಕೆ ಮಾರಾಟ ಮಾಡದೆ ಇಟ್ಟುಕೊಂಡಿದ್ದಾರೆ. ಸರ್ಕಾರ ಪಾನ್ ಮಸಾಲಕ್ಕೆ ತೆರಿಗೆ ಏರಿಸಿದೆ. ಶಿವಮೊಗ್ಗ ಮಾಮ್ ಕೋಸ್ ಸಂಸ್ಥೆಯಲ್ಲೇ ಕಳೆದ ವರ್ಷಕ್ಕಿಂತ 3 ಪಟ್ಟುಹೆಚ್ಚು ಅಡಕೆ ದಾಸ್ತಾನು ಇದೆ. ಸದ್ಯಕ್ಕೆ ಅಡಕೆ ಧಾರಣೆ ಏರುವ ಲಕ್ಷಣ ಇಲ್ಲ.

-ಕೃಪಾಲ್ ಗೌಡ, ಅಡಕೆ ಬೆಳೆಗಾರ, ಮುತ್ತಿನಕೊಪ್ಪ,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಕನೂರ ಪರ ಜೋಶಿ ಪ್ರಚಾರ
ಮಹದಾಯಿ ಅನುಮತಿ, 5 ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಿ