ದೊಡ್ಡಬಳ್ಳಾಪುರ: ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಲು ಹಾಗೂ ಲೈಂಗಿಕ ಹಗರಣ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಲು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ - ಕೆಆರ್‌ಎಸ್ ಪಕ್ಷದ ನೇತೃತ್ವದಲ್ಲಿ ಇದೇ ಮೇ 13ರಂದು ಸೋಮವಾರ ಹಾಸನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್ ಹೇಳಿದರು.
ರಾಜಕೀಯ ಪಕ್ಷಗಳು ಪೆನ್‌ಡ್ರೈವ್ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿವೆ. ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡ, ಬಿಡುಗಡೆ ಮಾಡಿದವರೇ ತಪ್ಪಿತಸ್ಥ ಎಂದು ಹೇಳುತ್ತಾರೆ. ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದವನು ದೊಡ್ಡ ತಪ್ಪಿತಸ್ಥ ಎಂದ ಅವರು, ತಪ್ಪು ಮಾಡಿದವನು ತಲೆ ಮರೆಸಿಕೊಂಡಿದ್ದಾನೆ. ಒಂದೇ ಕಡೆ ಹಣ ಸೇರಿದಂತೆ ಮನುಷ್ಯನ ಸ್ವಭಾವ ಬದಲಾಗುವಂತೆ ರಾಜಕೀಯ ಶಕ್ತಿ ಒಂದು ಕುಟುಂಬದಲ್ಲಿ ಕೇಂದ್ರೀಕರಣಗೊಂಡಾಗ ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳಿದರು.
ತಪ್ಪು ಗೊತ್ತಿದ್ದರೂ ಟಿಕೆಟ್ ಕೊಟ್ಟ ಮೈತ್ರಿ ಪಕ್ಷಗಳು:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕುರಿತು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದ್ದರೂ 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಟಿಕೆಟ್ ನೀಡಿದೆ. ಆದರೆ ಪ್ರಕರಣ ಹೊರ ಬರುತ್ತಿದ್ದಂತೆ ತಮಗೂ ಪ್ರಜ್ವಲ್ ರೇವಣ್ಣರಿಗೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಬಿಜೆಪಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಕುರಿತಾದ ಪೆನ್ ಡ್ರೈವ್ ಪ್ರಕರಣವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಎಸ್ಐಟಿ ತನಿಖಾ ತಂಡದಿಂದ ಬಿಡುಗಡೆಗೊಳಿಸಿ ಕೇಂದ್ರದ ಸಿಬಿಐಗೆ ಒಪ್ಪಿಸಿದರೆ ಉತ್ತಮ ಎಂದ ಅವರು, ತನಿಖಾ ಸಂಸ್ಥೆಗಳು ನಿಷ್ಠೆಯಿಂದ ಶ್ರಮಿಸುತ್ತವೆ. ಆದರೆ ಅಧಿಕಾರದಲ್ಲಿರುವ ಪಕ್ಷಗಳು ಹಾಗೂ ರಾಜಕಾರಣಿಗಳು ತನಿಖಾ ಸಂಸ್ಥೆಗಳು ನೀಡಿರುವ ಮಾಹಿತಿ ಮರೆ ಮಾಚುತ್ತವೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಎಲ್.ಎನ್.ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಮಾರುತಿ, ತಾಲ್ಲೂಕು ರೈತ ಘಟಕದ ಅಧ್ಯಕ್ಷ ವಿಜಯಕುಮಾರ್ ತಾಲೂಕು ಚಾಲಕರ ಘಟಕದ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.12ಕೆಡಿಬಿಪಿ1-