ಬಳ್ಳಾರಿ: ರಾಜ್ಯದಲ್ಲಿರುವ ವಿಕಲಚೇತನರಿಗೆ ಪಿಂಚಣಿ ಹೆಚ್ಚಿಸಿ ಅವರಿಗೂ ಮತ್ತು ಅವರ ಕುಟುಂಬಕ್ಕೂ ಮಾನವೀಯತೆ ಆಧಾರದಲ್ಲಿ ಆರ್ಥಿಕವಾಗಿ ನೆರವಾಗಲು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ವಿಧಾನಪರಿಷತ್ತಿನಲ್ಲಿ ಬುಧವಾರ ಧ್ವನಿ ಎತ್ತಿದ್ದಾರೆ.
ಶೇ.40ರಿಂದ 75ರಷ್ಟು ಅಂಗವಿಕಲತೆ ಇರುವವರಿಗೆ ಮಾಸಿಕ ₹800, ಶೇ. 75ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಇರುವವರಿಗೆ ₹1400 ಮತ್ತು ಶೇ.75ರಷ್ಟು ಮನೋವೈಕಲ್ಯತೆ ಇರುವವರಿಗೆ ₹2000 ಪಿಂಚಣಿಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ವೈ.ಎಂ. ಸತೀಶ್ ಮಾತನಾಡಿ, ಶೇ.75ರಷ್ಟು ಮನೋವೈಕಲ್ಯತೆ ಹೊಂದಿರುವ ಮತ್ತು ಈ ಪ್ರಮಾಣಕ್ಕಿಂತಲೂ ಹೆಚ್ಚಿರುವ ವ್ಯಕ್ತಿಗಳಿಗೆ ಹಾಗೂ ವಿಕಲಚೇತನರಿಗೆ ಮಾನವೀಯತೆಯ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.ಈ ಕುರಿತು ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಜೆಟ್ ಪೂರ್ವದಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ಸದನಕ್ಕೆ ಸ್ಪಷ್ಟಪಡಿಸಿದರು.
ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಮತ್ತು ವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲಿ ತಾಲೂಕು ಮಟ್ಟದ ಆಡಳಿತ ಸೌಧಗಳ ಅಗತ್ಯವಿದ್ದು, ಆದಷ್ಟು ಶೀಘ್ರದಲ್ಲಿ ಎಲ್ಲ 11 ತಾಲೂಕುಗಳಲ್ಲಿ ತಾಲೂಕು ಆಡಳಿತ ಸೌಧಗಳ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದರು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಮತ್ತು ಸಂಡೂರು ತಾಲೂಕುಗಳಲ್ಲಿ ತಾಲೂಕು ಆಡಳಿತಸೌಧಗಳಿವೆ. ಕಂಪ್ಲಿ, ಕುರುಗೋಡು ತಾಲೂಕುಗಳಲ್ಲಿ ತಾಲೂಕು ಆಡಳಿತಸೌಧ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉತ್ತರಿಸಿದರು.