ಕೊಪ್ಪಳ: ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ ಎಂದು ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ಜರುಗಿತು.
ನಗರದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ಜರುಗಿತು. ನಗರದ ಬಸವೇಶ್ವರ ವೃತ್ತದಲ್ಲಿ ಒಲೆ ಹೂಡಿ ಸೌದೆಯಿಂದ ಅಡುಗೆ ತಯಾರಿಸಿ ಬೆಲೆ ಏರಿಕೆ ಖಂಡಿಸಿದರು. ಬಸವೇಶ್ವರ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ಕಾವು ಹೆಚ್ಚಿದ್ದರಿಂದ ಕೆಲಕಾಲ ಸಂಚಾರ ವ್ಯಥೆಯ ಉಂಟಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸದ ರಾಜಶೇಖರ್ ಹಿಟ್ನಾಳ್, ಕೇಂದ್ರ ಸರ್ಕಾರ ಜನಸಾಮಾನ್ಯರ ಸಮಸ್ಯೆ ನಿರ್ಲಕ್ಷ್ಯ ಮಾಡುತ್ತಿದೆ. ಪೆಟ್ರೋಲ್,ಗ್ಯಾಸ್, ಡೀಸೆಲ್ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆ ರೋಸಿ ಹೋಗಿದ್ದಾರೆ ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ಪದೇ ಪದೆ ಬೆಲೆ ಹೆಚ್ಚಳ ಮಾಡುತ್ತಿದೆ. ಸಾಮಾನ್ಯ ಜನರು ಬದುಕುವುದು ದುಸ್ತರವಾದ ಇಂತಹ ಸ್ಥಿತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಇದರ ಬಗ್ಗೆ ರಾಜ್ಯದಲ್ಲಿರುವ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಅಲ್ಲದೆ ಇತ್ತೀಚಿಗೆ ನೀಟ್ ಪರೀಕ್ಷೆಯಲ್ಲಿ ಉಂಟಾದ ಸಮಸ್ಯೆಯಿಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆಲ್ಲದಕ್ಕೂ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡದೇ ಇದ್ದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನ್‌ಸಾಬ್ ಡೂಟಿಹಾಳ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಕೃಷ್ಣಾ ಇಟ್ಟಂಗಿ, ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ್, ಶ್ರೀನಿವಾಸ ಗುಪ್ತ, ಮಂಜುನಾಥ್ ಗೊಂಡಬಾಳ, ಗಂಗಮ್ಮ, ಸೌಮ್ಯ ಕಂದಗಲ್, ಮಲ್ಲಿಕಾರ್ಜುನ, ಸುರೇಶ್ ದಾಸರೆಡ್ಡಿ, ಲಿಂಗೇಶ್ ಕಲ್ಗುಡಿ, ಗವಿಸಿದ್ದಪ್ಪ ಕರಡಿ, ಗವಿಸಿದ್ದನಗೌಡ ಪಾಟೀಲ್, ಶೈಲಜಾ ಹಿರೇಮಠ್, ಜ್ಯೋತಿ ಗೊಂಡಬಾಳ, ರೇಷ್ಮಾ ಖಾಜಾವಲಿ, ಸಾವಿತ್ರಿ ಮುಜುಮ್ದಾರ್, ಚಾಂದ್ ಪಾಷಾ ಕಿಲ್ಲೆದಾರ್, ಅಕ್ಬರ್ ಪಾಷಾ ಪಲ್ಟನ್ ಇತರರಿದ್ದರು.