ಹುಬ್ಬಳ್ಳಿ:
ಕೇಂದ್ರದಲ್ಲಿ ಅಧಿಕಾರಕ್ಕೆ ಬರದಿರುವ ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 200 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸದೆ ಅವರು ಅಧಿಕಾರಕ್ಕೆ ಹೇಗೆ ಬರುತ್ತಾರೆ? ಎಂದು ಪ್ರಶ್ನಿಸಿದರು.
ಡಿಎಂಕೆಯದ್ದು ಪ್ರಣಾಳಿಕೆ ಬೇರೆ, ಟಿಎಂಸಿಯದ್ದು ಬೇರೆ, ಇನ್ನು ಆಮ್ ಆದ್ಮಿ ಪಕ್ಷದ್ದು ಬೇರೆ. ಕಾಂಗ್ರೆಸ್‌ದು ಮತ್ತೊಂದು. ಜನರು ಯಾವುದನ್ನು ನಂಬಬೇಕು. ಜನರಿಗೆ ಅಪ್ಪಟ ಸುಳ್ಳು ಹೇಳಿ ಇಂತಹ ಆಶ್ವಾಸನೆ ಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬೊಮ್ಮಾಯಿ, ಮೊದಲು 543 ಸ್ಥಾನಗಳಲ್ಲಿ ಸ್ಪರ್ಧಿಸಿ ಇಂತಹ ಆಶ್ವಾಸನೆ ಕೊಡಿ ಎಂದು ಕಾಂಗ್ರೆಸಿಗೆ ಸವಾಲು ಹಾಕಿದರು.ಸರ್ಕಾರವೇ ಕಾರಣ:
ಬರ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಕೇಂದ್ರಕ್ಕೆ ಮನವಿ ಕಳುಹಿಸುವಾಗ ರಾಜ್ಯದ ವಾಸ್ತವ ಸ್ಥಿತಿ ಕಳುಹಿಸಿರಲಿಲ್ಲ. ಸದ್ಯಕ್ಕೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ರೈತರಿಗೆ ಹಣ ಬಿಡುಗಡೆ ಮಾಡಲಿ ಎಂದ ಅವರು, ರಾಜಕೀಯ ಪ್ರೇರಿತ ದೃಷ್ಟಿಯಿಂದ ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ಸುಪ್ರಿಂ ಕೋರ್ಟಿಗೆ ಹೋಗಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಅನುದಾನ ಕಡಿಮೆ ಆಗಲು ಸಿದ್ದರಾಮಯ್ಯ ಕಾರಣ. ಹಿಂದಿನ ಯುಪಿಎ ಸರ್ಕಾರ ಇದ್ದಾಗ 8-10 ತಿಂಗಳ ನಂತರ ಪರಿಹಾರ ನೀಡಿದ ಉದಾಹರಣೆಯಿದೆ. ಇವರಿಗೆ ರೈತರ ಬಗ್ಗೆ ಕಳಕಳಿ ಇಲ್ಲ. ರೈತ ವಿರೋಧಿ ಸರ್ಕಾರ ಇದಾಗಿದೆ ಎಂದರು.ಬಿಜೆಪಿಯ 25 ಸಂಸದರು ಪುಕ್ಕಲರು ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಂದು ವ್ಯವಸ್ಥೆಯೊಳಗೆ ಕೆಲಸ ಮಾಡುವಾಗ ವ್ಯಕ್ತಿಗತ ಪ್ರಶ್ನೆ ಎನ್ನುವುದು ಬರುವುದಿಲ್ಲ. ಮೋದಿ ಅವರ ಕಾಲದಲ್ಲಿ ಯಾವುದೇ ಲಾಬಿ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುತ್ತಾರೆ. ಹೀಗಾಗಿ ರಾಜ್ಯಕ್ಕೆ ಕೇಂದ್ರಕ್ಕೆ ಏನು ಸಿಗಬೇಕು ಅದೆಲ್ಲವೂ ಸಿಗುತ್ತದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ಕಡೆ ಹೋಗಿ ಅರ್ಜಿ ಕೊಡಬೇಕು. ಇದು ಕಾಂಗ್ರೆಸ್‌ನವರ ಸ್ಟೈಲ್. ಇವರ ರೀತಿ ನಾವು ಮಾಡಲು ಬರುವುದಿಲ್ಲ. ಕಾಂಗ್ರೆಸ್ ಮುಖಂಡರಂತೆ ನಾವು ಮೋದಿ ಅವರ ಮುಂದೆ ಕೈಕಟ್ಟಿ ನಿಲ್ಲುವ ಪ್ರಶ್ನೆಯೇ ಇಲ್ಲ. ನಾವು ಮೋದಿ ಅವರ ಜತೆಗೆ ನಿಲ್ಲುತ್ತೇವೆ. ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.