ಹಳಿಯಾಳ: ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರು ಇಂದಿನಿಂದಲೇ ಸನ್ನದ್ಧರಾಗಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಕರೆ ನೀಡಿದರು.
ವಾತಾವರಣ ನಮ್ಮ ಪರವಾಗಿ ಇರುವಾಗ ಕಾರ್ಯಕರ್ತರು ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲಪಡಿಸಬೇಕು. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದ ತತ್ವ- ಸಿದ್ಧಾಂತಗಳನ್ನು ಜನರಿಗೆ ತಲುಪಿಸಬೇಕು. ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಈ ವೇಳೆ ವಿಧಾನಪರಿಷತ್ ಚುನಾವಣೆಯಲ್ಲಿ ಎಸ್.ವಿ. ಸಂಕನೂರ್ ಅವರ ಪರವಾಗಿ ಮತದಾರರು, ಪದಾಧಿಕಾರಿಗಳು ಹಾಗೂ ಮುಖಂಡರಿಗೆ ಮಾರ್ಗದರ್ಶನ ನೀಡಿ ಪ್ರೇರಣೆ ನೀಡಿದ ಹಿನ್ನೆಲೆ ಹಳಿಯಾಳ ಮಂಡಲದ ವತಿಯಿಂದ ಮಾಜಿ ಶಾಸಕ ಸುನಿಲ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣವರ ವಹಿಸಿದ್ದರು. ಜಿಲ್ಲಾ ವಿಶೇಷ ಆಹ್ವಾನಿತ ಮಂಗೇಶ ದೇಶಪಾಂಡೆ, ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಬಸಣ್ಣ ಕುರುಬಗಟ್ಟಿ, ಸೋಣಪ್ಪ ಸುಣಕಾರ, ಗಣಪತಿ ಕರಂಜೇಕರ, ಮಹೇಶ ಮೇಘಾನಿ, ಯಲ್ಲಪ್ಪ ಹೇಳವರ, ಮೋಹನ್ ಗೌಡ, ಚೂಡಪ್ಪ, ಬೂಬಾಟಿ, ಸುಭಾಷ್ ಪಾಟೀಲ್, ಉದಯ ಜಾಧವ, ಪ್ರಶಾಂತ ನಾಯ್ಕ್, ಜಯಲಕ್ಷ್ಮಿ ಚವಾಣ್, ವೀಣಾ ಕುಂಬಾರ, ಶಾಂತಾ ಹಿರೇಕರ, ಈರವ್ವ ಕೊರವರ ಸೇರಿದಂತೆ ವಿವಿಧ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.