ದೀಪಾವಳಿ ಲಕ್ಷ್ಮೀ ಪೂಜೆಗೆ ಸಜ್ಜಾದ ಹಾವೇರಿ ಜಿಲ್ಲೆಯ ಜನತೆ

KannadaprabhaNewsNetwork |  
Published : Oct 21, 2025, 01:00 AM IST
20ಎಚ್‌ವಿಆರ್5, 5ಎ | Kannada Prabha

ಸಾರಾಂಶ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜಿಲ್ಲೆಯ ಜನತೆಯಲ್ಲಿ ಮನೆ ಮಾಡಿದ್ದು, ಬೆಲೆ ಏರಿಕೆ ನಡುವೆಯೂ ಲಕ್ಷ್ಮೀ ಪೂಜೆಗೆ ಬೇಕಾದ ಹೂವು, ಹಣ್ಣು, ಬಾಳೆಕಂಬ ಸೇರಿದಂತೆ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಸೋಮವಾರ ನಗರದ ಮಾರುಕಟ್ಟೆಯಲ್ಲಿ ಜೋರಾಗಿಯೇ ನಡೆದಿರುವುದು ಕಂಡುಬಂದಿತು.

ಹಾವೇರಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜಿಲ್ಲೆಯ ಜನತೆಯಲ್ಲಿ ಮನೆ ಮಾಡಿದ್ದು, ಬೆಲೆ ಏರಿಕೆ ನಡುವೆಯೂ ಲಕ್ಷ್ಮೀ ಪೂಜೆಗೆ ಬೇಕಾದ ಹೂವು, ಹಣ್ಣು, ಬಾಳೆಕಂಬ ಸೇರಿದಂತೆ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಸೋಮವಾರ ನಗರದ ಮಾರುಕಟ್ಟೆಯಲ್ಲಿ ಜೋರಾಗಿಯೇ ನಡೆದಿರುವುದು ಕಂಡುಬಂದಿತು.

ದೀಪಾವಳಿ ಅಮಾವಾಸ್ಯೆಯಂದು ನಗರ ಸೇರಿದಂತೆ ಜಿಲ್ಲಾದ್ಯಂತ ಲಕ್ಷ್ಮೀಪೂಜೆ ನೆರವೇರಿಸಲು ಜಿಲ್ಲೆಯ ಜನತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಅ. 22ರಂದು ಬಲಿಪಾಡ್ಯ (ಗುರಜವ್ವ) ಹಬ್ಬದ ಪ್ರಯುಕ್ತ ನಗರದ ಹೂವಿನ ಮಾರುಕಟ್ಟೆಯಲ್ಲಿ ತರಹೇವಾರಿ ವಿವಿಧ ಹೂವುಗಳನ್ನು ಖರೀದಿಸಲು ಜನರು ಅಂಗಡಿ ಮಳಿಗೆಗಳಿಗೆ ಮುಗಿಬಿದ್ದಿದ್ದರು. ಪ್ರಮುಖ ಜನದಟ್ಟಣೆ ಕಂಡುಬರುವ ಸ್ಥಳಗಳಾದ ನಗರದ ಮೈಲಾರ ಮಹದೇವ ವೃತ್ತ, ಕಾಗಿನೆಲೆ ವೃತ್ತ, ಲಾಲ್‌ಬಹದ್ದೂರ ಶಾಸ್ತಿ ಮಾರುಕಟ್ಟೆ, ಜೆ.ಎಚ್. ಪಟೇಲ್ ವೃತ್ತ, ಎಂ.ಜಿ. ರಸ್ತೆ ಹಾಗೂ ನಗರಸಭೆ ಮುಂಭಾಗ ಸೇರಿದಂತೆ ವಿವಿಧೆಡೆ ಬಾಳೆದಿಂಡು, ಚೆಂಡು ಹೂವು, ಮಾವಿನತೋರಣ, ಕಬ್ಬು, ಬಿಳಿಜೋಳದ ದಂಟು, ನಿಂಬೆಹಣ್ಣು, ಬೂದ ಕುಂಬಳಕಾಯಿ, ಬಗಣಿಗರಿ ಸೇರಿದಂತೆ ನಾನಾ ಬಗೆಯ ಅಗತ್ಯ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡುಬಂದಿತು.

ವ್ಯಾಪಾರ ಜೋರು:ಹಟ್ಟಿಹಬ್ಬ ದೀಪಾವಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ಹೂವುಗಳ ಬೆಲೆ ತುಟ್ಟಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿತ್ತು. ವರ್ಷಕ್ಕೊಮ್ಮೆ ಬರುವ ದೊಡ್ಡಹಬ್ಬ ಬೇರೆ, ಬೆಲೆ ಜಾಸ್ತಿಯಾದರೂ ಖರೀದಿ ಮಾಡಬೇಕು ಎಂಬ ಅನಿವಾರ್ಯತೆ ಗ್ರಾಹಕರಲ್ಲಿ ಎದುರಾಯಿತು. ಜಾಸ್ತಿ ಖರೀದಿಸುವ ಬದಲು ಕಡಿಮೆ ಖರೀದಿಸುವ ಉದ್ದೇಶದಿಂದ ಗ್ರಾಹಕರು ಮಾರುಕಟ್ಟೆಗೆ ಆಗಮಿಸಿದ್ದರು.

ಗಗನಕ್ಕೇರಿದ ಬೆಲೆ: ಬಾಳೆದಿಂಡು ಜೋಡಿಗೆ ₹30-60, ಬೂದು ಕುಂಬಳಕಾಯಿ ಒಂದಕ್ಕೆ ₹50-120, ಕಬ್ಬು ಜೋಡಿಗೆ ₹30-70, ₹20ಕ್ಕೆ 5 ನಿಂಬೆಹಣ್ಣು, ಮಾವಿನತೋರಣ ಒಂದು ಕಟ್‌ಗೆ ₹10-20, ತಾವರೆ ಹೂವು ಜೋಡಿಗೆ ₹20-30, ಬಗಣಿಗರಿ ಕಟ್‌ಗೆ ₹30-40, ಬಿಳಿಜೋಳ ದಂಟು, ಆನೆಬಡ್ಡಿ ಹೂವು, ಹೊನ್ನಾರಕಿ ಹೂವು ಕಟ್‌ಗೆ ತಲಾ ₹20ರಂತೆ ಮಾರಾಟ ಮಾಡಲಾಗುತ್ತಿದೆ. ಮಳೆ ವಾತಾವರಣದ ಕಾರಣ ಸಾಮಗ್ರಿ ಕಡಿಮೆ ಪ್ರಮಾಣದಲ್ಲಿ ಬಂದಿದ್ದು, ಬೆಲೆ ಏರಿಕೆಯಾಗಿದೆ. ಬೆಲೆ ತುಟ್ಟಿಯಾಗಿದ್ದರೂ ಜನರು ಚೌಕಾಸಿ ಮಾಡುತ್ತಾ ಖರೀದಿಸುತ್ತಿದ್ದರು.

ಅಂಗಡಿಗಳಲ್ಲಿ ಜನಜಂಗುಳಿ: ನಗರದ ಬಟ್ಟೆಯಂಗಡಿ, ಬಂಗಾರದಂಗಡಿ, ಮೊಬೈಲ್, ಟಿವಿ ಹಾಗೂ ಬೈಕ್ ಶೋರೂಂಗಳಲ್ಲಿ ಹಬ್ಬಕ್ಕೆ ಹೊಸ ಹೊಸ ವಸ್ತುಗಳನ್ನು ಖರೀದಿಸುವಲ್ಲಿ ಜನರು ನಿರತರಾಗಿದ್ದರು. ಬಟ್ಟೆಯಂಗಡಿಗಳಲ್ಲಿ ವಿವಿಧ ಬಗೆಯ ಉಡುಗೆಗಳನ್ನು ಖರೀದಿಸಿದರೆ, ಬಂಗಾರ ಮಳಿಗೆಗಳಲ್ಲಿ ಆಭರಣ ಪ್ರಿಯರು ಬಂಗಾರ, ಬೆಳ್ಳಿ ಸಾಮಗ್ರಿಗಳನ್ನು ಖರೀದಿಸುವತ್ತ ಮೊರೆ ಹೋಗಿದ್ದರು. ಇನ್ನೂ ಯುವಕ, ಯುವತಿಯರು ಹಬ್ಬದ ನೆನಪಿಗಾಗಿ ಟಿವಿ, ಮೊಬೈಲ್‌ನಂತಹ ಎಲೆಕ್ಟ್ರಾನಿಕ್ ವಸ್ತು ಖರೀದಿಸುವಲ್ಲಿ ಕಾರ್ಯೋನ್ಮುಖರಾಗಿದ್ದರು. ದೀಪಾವಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಮಾರುಕಟ್ಟೆಗೆ ಬರುತ್ತಿದ್ದಾರೆ. ಅತಿವೃಷ್ಟಿಯಿಂದ ಸರಿಯಾಗಿ ಸಾಮಗ್ರಿ ಬಂದಿಲ್ಲ. ರೇಟು ಕೂಡ ಜಾಸ್ತಿಯಾಗಿದೆ. ದೊಡ್ಡ ಹಬ್ಬವಾಗಿರುವುದರಿಂದ ಬೆಲೆ ಏರಿಕೆಯಾದ್ರೂ ಚೌಕಾಸಿ ಮಾಡಿ ಖರೀದಿ ಮಾಡ್ತಾರೆ ಎಂದು ಹಣ್ಣಿನ ವ್ಯಾಪಾರಿ ಆಸೀಫ್ ಮುಲ್ಲಾ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ