ಚಂದ್ರು ಕೊಂಚಿಗೇರಿ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ನದಿಯಲ್ಲಿನ ಮರಳಿನ ನಿಕ್ಷೇಪಗಳನ್ನು ಗುರುತಿಸಿ, ಜಂಟಿ ಸರ್ವೆ ಮುಗಿಸಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ನವಲಿ-2, ಸೋವೇನಹಳ್ಳಿ-1, ಹರವಿ-1, ಹರಪನಹಳ್ಳಿ ತಾಲೂಕಿನ ತಾವರೆಗುಂದಿ-2 ಸೇರಿದಂತೆ ಒಟ್ಟು 6 ಮರಳಿನ ಬ್ಲಾಕ್‌ಗಳನ್ನು ಟಾಸ್ಕ್‌ಪೋರ್ಸ್ ಸಮಿತಿಯಿಂದ ಕೆಎಸ್‌ಎಂಸಿಎಲ್‌ಗೆ ನೀಡಲಾಗಿತ್ತು.
ಕೆಎಸ್‌ಎಂಸಿಎಲ್‌ಗೆ ನೀಡಿದ್ದ ಮರಳಿನ ಬ್ಲಾಕ್‌ಗಳಲ್ಲಿನ ಮರಳನ್ನು ಸಂಗ್ರಹಿಸಿ, ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ಪರಿಸರ ಇಲಾಖೆಯಿಂದ ಪರಿಸರ ವಿಮೋಚನಾ ಪತ್ರ ಪಡೆಯಬೇಕಿತ್ತು. ಈ ಕುರಿತು 3 ವರ್ಷ ಕಳೆದರೂ ಪತ್ರ ಮಾತ್ರ ಸಿಗಲಿಲ್ಲ, ಅತ್ತ ಜನರಿಗೂ ಬೊಗಸೆ ಮರಳು ಮಾರಾಟ ಮಾಡಿಲ್ಲ. ಈ ಕುರಿತು ಕೆಎಸ್‌ಎಂಸಿಎಲ್ ಅಷ್ಟೇನೂ ಆಸಕ್ತಿ ತೋರಲಿಲ್ಲ.ಈಚಿಗೆ ಜರುಗಿದ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿ, ಕೆಎಸ್‌ಎಂಸಿಎಲ್‌ಗೆ ನೀಡಿದ್ದ 6 ಮರಳಿನ ಬ್ಲಾಕ್‌ಗಳನ್ನು ಟಾಸ್ಕ್‌ಪೋರ್ಸ್ ಸಮಿತಿ ಮರಳಿ ಪಡೆದು, ನದಿ ತೀರದ ಎಲ್ಲ ಮರಳಿನ ಬ್ಲಾಕ್‌ಗಳನ್ನು ಟೆಂಡರ್ ಮಾಡಲು ಚಿಂತನೆ ನಡೆಸಲಾಗಿದೆ.
ಮರಳಿನ ಸ್ಟಾಕ್‌ಯಾರ್ಡ್‌ಗಳಲ್ಲಿ 2022ರ ಮೇ ತಿಂಗಳಿಂದ ಈ ವರೆಗೂ ಅಂದರೆ 2 ವರ್ಷಗಳ ಕಾಲ ಜನರಿಗೆ ಹಾಗೂ ಗುತ್ತಿಗೆದಾರರಿಗೆ ಮರಳು ಸಿಕ್ಕಿಲ್ಲ. ಇದರ ಪರಿಣಾಮ ಅಕ್ರಮ ಮರಳು ದಂಧೆಕೋರರು ದುಪ್ಪಟ್ಟು, ಬೆಲೆಗೆ ಮರಳು ಮಾರಾಟ ಮಾಡಿದ್ದರೂ ಯಾರು ಕೇಳುವವರು ಇಲ್ಲದಂತಾಗಿತ್ತು.
ಈಗಾಗಲೇ ತುಂಗಭದ್ರಾ ನದಿ ತೀರದ ಎಲ್ಲ ಕಡೆಗೂ ಮರಳಿನ ಬ್ಲಾಕ್‌ಗಳನ್ನು ಗುರುತಿಸಲಾಗಿದೆ, ವಾರದೊಳಗೆ ಈ ಕುರಿತು ಅಧಿಸೂಚನೆ ಹೊರಡಿಸಲಾಗುತ್ತಿದೆ. ಕೆಎಸ್‌ಎಂಸಿಎಲ್‌ಗೆ ನೀಡಿದ್ದ 6 ಮರಳಿನ ಬ್ಲಾಕ್‌ಗಳೂ ಟೆಂಡರ್ ಆಗುತ್ತದೆ ಎಂದು ಹೊಸಪೇಟೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ಕೀರ್ತಿ ಕುಮಾರ್ ಹೇಳಿದರು.