ಪ್ರಜ್ವಲ್ ಪರ ಪ್ರಚಾರ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಅಸಡ್ಡೆ ಜತೆಗೆ ಅಸಹನೆ ಉಂಟಾಗಿದೆ ಎಂದು ಕೇಂದ್ರ ಯುವ ಸಬಲೀಕರಣ ಇಲಾಖೆಯ ಸಚಿವ ಆನೇಕಲ್ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಸಂಸದ ಪ್ರಜ್ವಲ್ ರೇವಣ್ಣ ಪರ ಮತಯಾಚನೆಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಜನರ ತೆರಿಗೆ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವ ಬದಲು ಗ್ಯಾರಂಟಿ ಯೋಜನೆಗೆ ಉಪಯೋಗ ಮಾಡಲಾಗುತ್ತಿದ್ದು ಕಳೆದ ಹತ್ತು ತಿಂಗಳಿನಿಂದ ಯಾವುದೇ ಹೊಸ ಕೆಲಸಗಳಿಗೆ ಚಾಲನೆ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಜೇಬಿನಿಂದ, ಮನೆಯಿಂದ ಹಣ ಕೊಡುತ್ತಿರುವಂತೆ ಹೇಳುತ್ತಿದ್ದಾರೆ. ಹಳೆಯ ಬಿಲ್ಲಿಗೆ ಹೊಸ ಬಾಣ ಎನ್ನುವ ಲೆಕ್ಕದಲ್ಲಿ ಬಿಜೆಪಿ ಆಡಳಿದ ಅವಧಿಯಲ್ಲಿ ಘೋಷಿತವಾಗಿದ್ದ ಯೋಜನೆಗಳಿಗೆ ಮತ್ತೊಮ್ಮೆ ಉದ್ಘಾಟನಾ ಭಾಗ್ಯ ಕರುಣಿಸುತ್ತಿದ್ದಾರೆ ಎಂದು ಟೀಕಿಸಿದರು.ಎಸ್ಸಿ ಎಸ್ಪಿ,ಸಮಾಜ ಕಲ್ಯಾಣ ಇಲಾಖೆ ಅನುದಾನಕ್ಕೆ ಕತ್ತರಿಹಾಕಿ ದಲಿತ ಸಮದಾಯಕ್ಕೆ ಅನ್ಯಾಯ ಮಾಡಲು ಹೊರಟಿರುವುದು ಅಕ್ಷಮ್ಯ. ವಿದ್ಯಾರ್ಥಿ ವೇತನ ಕೊಡಲು ಹಣವಿಲ್ಲವೆಂದರೆ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುವುದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಶಾಸಕರೇ ಅನುದಾನ ಕೊಟ್ಟಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದು ನಾಯಕರ ನಿಜ ಬಣ್ಣ ಚುನಾವಣೆಯಲ್ಲಿ ಬಯಲಾಗಲಿದೆ ಎಂದು ಕುಟುಕಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಮುಖಂಡರಾದ ನಾಗವೇದಿ ಶೇಖರಪ್ಪ, ಕೊಂಡೇನಾಳು ಪ್ರಸನ್ನ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಎನ್‌ಡಿಎ ಮೈತ್ರಿ ಅಭ್ಯರ್ಥಿ ಸಂಸದ ಪ್ರಜ್ವಲ್ ರೇವಣ್ಣ ಪರ ಮತಯಾಚನೆಗೆ ಅರಸೀಕೆರೆಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಕೇಂದ್ರ ಯುವ ಸಬಲೀಕರಣ ಸಚಿವ ಆನೇಕಲ್ ನಾರಾಯಣಸ್ವಾಮಿ ಮಾತನಾಡಿದರು.