ಕೊಪ್ಪಳ: ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ವತಿಯಿಂದ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಳಿ ಆಚರಣೆಯಲ್ಲಿ ಯುವಕ,ಯುವತಿಯರು ಹುಚ್ಚೆದ್ದು ಕುಣಿದರು. ಅಷ್ಟೇ ಅಲ್ಲ,ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಪತ್ನಿಯೊಂದಿಗೆ ಕುಣಿದು ಕುಪ್ಪಳಿದರು.
ರೇನ್ ಡ್ಯಾನ್ಸ್ ಸೇರಿದಂತೆ ಬಗೆ ಬಗೆ ಬಣ್ಣದ ಗನ್, ಬಣ್ಣ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿರುತ್ತದೆ. ಅದರಲ್ಲೂ ಯುವಕ, ಯುವತಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮೆರಾ ಕಣ್ಗಾವಲು ಸಹ ಇರುತ್ತದೆ. ಹೀಗೆ ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ಯುವಕರು,ಯುವತಿಯರು ರೇನ್ ಡ್ಯಾನ್ಸ್ ಮಾಡುತ್ತಾ ಹುಚ್ಚೆದ್ದು ಕುಣಿಯುತ್ತಿರುವುದು ಕಂಡು ಬಂತು.
ಶಾಸಕ ರಾಘವೇಂದ್ರ ಹಿಟ್ನಾಳ ಸಖತ್ ಸ್ಟೆಪ್ ಹಾಕಿದರೇ ಅವರ ಜತೆಗೆ ಸಂಸದ ರಾಜಶೇಖರ ಹಿಟ್ನಾಳ ತಮ್ಮ ಪತ್ನಿಯೊಂದಿಗೆ ಕುಣಿದು ಕುಪ್ಪಳಿಸಿದರು. ಕಾಂಗ್ರೆಸ್ ಮುಖಂಡ ಅಮರೇಶ ಕರಡಿ ಸಾಥ್ ನೀಡಿದರು.ಕಲಾವಿದೆಯ ನಿರೂಪಣೆ, ಡ್ಯಾನ್ಸ್ ಮತ್ತು ಡಿಜೆ ಸೌಂಡ್ ಹಾಗೂ ಬಣ್ಣ ಎರಚಾಡುವುದರಿಂದ ಇಡಿ ಕೊಪ್ಪಳ ತಾಲೂಕು ಕ್ರೀಡಾಂಗಣ ರಂಗು ರಂಗಾಗಿ ಕಾಣುತ್ತಿರುವುದು ಕಂಡು ಬಂದಿತು. ಹೀಗೆ ಯುವಕರು, ಯುವತಿಯರ ಕುಣಿತ ಮತ್ತು ಜನಪ್ರತಿನಿಧಿ, ಮುಖಂಡರು ವೇದಿಕೆ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಹೋಳಿ ಸಡಗರ,ಸಂಭ್ರಮ ಮುಗಿಲುಮುಟ್ಟಿತ್ತು.
ಹೋಳಿಯಾಟದಿಂದ ಕೊಪ್ಪಳ ನಗರ ಸ್ವಯಂ ಘೋಷಿತ ಬಂದ್ ಇರುವಂತೆ ಕಂಡು ಬಂದಿತು.
ವಿದ್ಯಾರ್ಥಿನಿ ಪರೀಕ್ಷೆ ಬರದಿರಲು ಕಾರಣ: ಕೊಪ್ಪಳ ನಗರದ ಸರ್ಕಾರಿ ಬಾಲಕೀಯರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉರ್ದು ವಿಷಯ ಬರಬೇಕಾಗಿದ್ದ ಏಕಮಾತ್ರ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು ಹಾಜರಾಗಿದ್ದು ಯಾಕೆ ಎನ್ನುವುದು ಈಗ ಭಾರಿ ಚರ್ಚೆಯಾಗುತ್ತಿದೆ.ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ವತಿಯಿಂದ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಬಣ್ಣದ ಹಬ್ಬ ಏರ್ಪಡಿಸಲಾಗಿತ್ತು.ಪರೀಕ್ಷಾ ಕೇಂದ್ರ ಇದ್ದಿದ್ದರಿಂದ ಬಣ್ಣ ಆಡಲು ಅನುಮತಿ ನೀಡಿರಲಿಲ್ಲ. ಹೀಗಾಗಿ ಅಥ್ಲೆಟಿಕ್ಸ್ ಅಸೋಷಿಯಶನ್ ದೊಡ್ಡ ಚಿಂತೆಗೀಡಾಗಿ ನೇತೃತ್ವ ವಹಿಸಿದ್ದ ಸಂಸದ ರಾಜಶೇಖರ ಹಿಟ್ನಾಳ ಪರೀಕ್ಷಾ ಸಮಯದ ನಂತರವೇ ತಾಲೂಕು ಕ್ರೀಡಾಂಗಣದಲ್ಲಿ ಬಣ್ಣ ಆಡುವುದಾಗಿ ಹೇಳಿದ್ದರು. ಆದರೆ, ವಿದ್ಯಾರ್ಥಿನಿ ಪರೀಕ್ಷೆಗೆ ಬಾರದಿರುವುದರಿಂದ ಹತ್ತುವರೆಗೆ ಪರೀಕ್ಷಾ ಕೇಂದ್ರ ಬಂದ್ ಆಗುತ್ತಿದ್ದಂತೆ ಅಲ್ಲಿಯೇ ಬಣ್ಣ ಆಡಲಾಯಿತು.
ಆದರೆ, ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಬಾರದಂತೆ ಮಾಡಲಾಗಿದೆ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ವಿದ್ಯಾರ್ಥಿನಿ ಯಾವುದೇ ಪ್ರತಿಕ್ರಿಯೇ ಸಹ ನೀಡದೆ ಮನೆಯಲ್ಲಿಯೂ ಇರದೆ ಅಂತರ ಕಾಯ್ದುಕೊಂಡಿದ್ದಾಳೆ.ಕಾಂಗ್ರೆಸ್ ಹೋಳಿ: ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಹೋಳಿ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಯಿತೇ ಎನ್ನುವ ಮಾತು ಕೇಳಿ ಬರಲಾಂಭಿಸಿದೆ. ಪಕ್ಷಾತೀತವಾಗಿ ಎಂದು ಹೇಳಲಾಗುತ್ತಿದ್ದರೂ ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ಸಂಸದ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ಇರುವುದರಿಂದ ಕಾಂಗ್ರೆಸಮಯ ಎಂದೇ ಹೇಳಲಾಗುತ್ತದೆ. ಇದೆ ಕಾರಣಕ್ಕಾಗಿ ಇತರೆ ಪಕ್ಷದವರು ಅಂತರ ಕಾಯ್ದುಕೊಂಡು ಇತರೆಡೆ ಬಣ್ಣವನ್ನಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.