ಕುಷ್ಟಗಿ: ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಎಲ್ಲೆಡೆ ರಂಗಿನಾಟದಲ್ಲಿ ಮಿಂದೆದ್ದ ಜನತೆ ಹ್ಯಾಪಿ ಹೋಳಿ ಎನ್ನುತ್ತಲೇ ಕಿರಿಯರು, ಹಿರಿಯರು ಮೈಮೇಲೆ ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು.
ಸಿಳ್ಳೆ, ಕೇಕೆ ಹೊಡೆಯುವುದು ಸಾಮಾನ್ಯವಾಗಿತ್ತು. ಇನ್ನೂ ಕೆಲವರು ಹಲಗೆ ಬಾರಿಸುತ್ತಲೇ ಅದರ ತಾಳಕ್ಕೆ ಹೆಜ್ಜೆ ಹಾಕಿ ಖುಷಿಪಟ್ಟರು. ಮೈ ತುಂಬ ಬಣ್ಣ ಎರಚಿಕೊಂಡು ನೃತ್ಯ ಮಾಡಿ ಸಂಭ್ರಮಿಸಿದರು.
ವಿಶಿಷ್ಟ ಆಚರಣೆ:ಕುಷ್ಟಗಿ ಗೆಳೆಯರ ಬಳಗದಿಂದ ಬಸ್ ನಿಲ್ದಾಣದ ಪಕ್ಕದ ಖಾಲಿ ಜಾಗದಲ್ಲಿ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟವಾಡಲು ಸಿದ್ಧತೆ ಮಾಡಲಾಗಿತ್ತು. ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು,ಕಿರಿಯರು ಯಾವುದೆ ಬೇಧವಿಲ್ಲದೇ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡು ಖುಷಿಯಿಂದಲೇ ಬಣ್ಣದಲ್ಲಿ ಮುಳುಗಿದರು. ಚಿಕ್ಕಮಕ್ಕಳು ಸಂತಸದಿಂದ ಪಾಲ್ಗೊಂಡಿದ್ದರು. ಮಹಿಳೆಯರು ತಮ್ಮ ಮನೆಯ ಮುಂದೆ ಇರುವ ಜನರೊಂದಿಗೆ ಪರಸ್ಪರ ಬಣ್ಣ ಎರಚಿ ಕುಣಿದು ಕುಪ್ಪಳಿಸಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಕಾಮದಹನ:ಮಂಗಳವಾರ ರಾತ್ರಿ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಕಾಮದಹನ ಮಾಡುವ ಮೂಲಕ ಹೋಳಿ ಆಚರಿಸಿದರು.
ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಸಂಕಷ್ಟ ದೂರ ಮಾಡಿ ಬದುಕನ್ನು ವರ್ಣಮಯಗೊಳಿಸುವ ಹಬ್ಬ ಹೋಳಿ ಹಬ್ಬವಾಗಿದೆ.ಇದರಿಂದ ಈ ಹಬ್ಬದಲ್ಲಿ ಜಾತಿಬೇಧ ಮರೆತು ಎಲ್ಲರೂ ಬಣ್ಣವಾಡುತ್ತಾರೆ ಕುಷ್ಟಗಿ ಗೆಳೆಯರ ಬಳಗದಿಂದ ಈ ವರ್ಷ ವಿಶಿಷ್ಟವಾಗಿ ಹೋಳಿ ಹಬ್ಬದ ಆಚರಣೆಗೆ ಮುಂದಾಗಿದ್ದು ಹೊಸ ಸಂಪ್ರದಾಯ ಹಾಕಿಕೊಟ್ಟಂತಾಗಿದೆ ಎಂದರು.
ವಿವಿಧ ಇಲಾಖೆಯ ಅಧಿಕಾರಿಗಳು ಹೋಳಿ ಹಬ್ಬಆಚರಿಸಿ ಸಂಭ್ರಮಿಸುತ್ತಿರುವದು ಕಂಡು ಬಂತು. ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ವಿಶ್ವನಾಥ ಹಿರೇಗೌಡರ, ಪಿಎಸೈ ಹನಮಂತಪ್ಪ ತಳವಾರ ನೇತೃತ್ವದಲ್ಲಿ ಬಂದೊಬಸ್ತ್ ಒದಗಿಸಲಾಗಿತ್ತು.