ಶಿವನಾಮ ಸ್ಮರಣೆಗೆ ಜನರ ಸಿದ್ಧತೆ

KannadaprabhaNewsNetwork |  
Published : Feb 15, 2026, 03:15 AM IST
ನವಲಗುಂದ ಪಟ್ಟಣದಲ್ಲಿ ಹಬ್ಬದ ಮುನ್ನಾ ದಿನವಾದ ಶನಿವಾರ ವಿವಿಧ ಹಣ್ಣುಗಳನ್ನು ಜನರು ಖರೀದಿಸಿಸುತ್ತಿರುವುದು. | Kannada Prabha

ಸಾರಾಂಶ

ಕಲ್ಲಂಗಡಿ, ಸೇಬು, ದ್ರಾಕ್ಷಿ, ಕರಬೂಜ, ಖರ್ಜೂರ, ಕಿತ್ತಳೆ, ಮೂಸಂಬಿ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದು ವ್ಯಾಪಾರ ಭರ್ಜರಿಯಾಗಿದೆ.

ಫಕೃದ್ದೀನ್ ಎಂ ಎನ್

ನವಲಗುಂದ:

ಮಹಾಶಿವರಾತ್ರಿ ನಿಮಿತ್ತ ಪಟ್ಟಣದ ಮಾರುಕಟ್ಟೆಯಲ್ಲಿ ತರಹೇವಾರಿ ಹಣ್ಣುಗಳ ವ್ಯಾಪಾರ ಜೋರಾಗಿದ್ದು, ಶಿವನ ಆರಾಧನೆಗೆ ಕ್ಷಣಗಣನೆ ಶುರುವಾಗಿದೆ.ಪಟ್ಟಣದ ಬಸ್‍ ನಿಲ್ದಾಣ, ಗಾಂಧಿ ಮಾರುಕಟ್ಟೆ, ಮಲ್ಲಿಕಾರ್ಜುನ ದೇವಸ್ಥಾನ, ಬಿಎಸ್‌ಎನ್‌ಎಲ್‌ ಕಚೇರಿ ಮುಂಭಾಗ, ಲಿಂಗರಾಜ ವೃತ್ತ ಸೇರಿ ರಸ್ತೆಗಳಲ್ಲಿ ಹಣ್ಣು ಮಾರಾಟ ಮಾಡಲಾಗುತ್ತಿದೆ. ಕಲ್ಲಂಗಡಿ, ಸೇಬು, ದ್ರಾಕ್ಷಿ, ಕರಬೂಜ, ಖರ್ಜೂರ, ಕಿತ್ತಳೆ, ಮೂಸಂಬಿ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದು ವ್ಯಾಪಾರ ಭರ್ಜರಿಯಾಗಿದೆ.

ಹಬ್ಬದ ಹಿನ್ನೆಲೆ ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ವಿವಿಧ ಹಣ್ಣು, ಹೂವುಗಳನ್ನು ಜನರು ಖರೀದಿಸುತ್ತಿರುವುದು ಕಂಡುಬಂತು. ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯಲು ಪೈಪೋಟಿಗೆ ಬಿದ್ದು ದರ ಕೂಗುತ್ತಿದ್ದರು. ಒಂದು ಕೆಜಿ ಕಲ್ಲಂಗಡಿಯನ್ನು ₹ 30-40ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಇನ್ನು ಕರಬೂಜ ಕೆಜಿಗೆ ₹50-60, ದ್ರಾಕ್ಷಿ ಕೆಜಿಗೆ ₹ 100ರಿಂದ 120, ಬಾಳೆಹಣ್ಣು ಡಜನ್‍ಗೆ ₹ 35, ದಾಳಿಂಬೆ-ಖರ್ಜೂರ ಕೆಜಿಗೆ ₹120ರಿಂದ 30ಕ್ಕೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಾಗಿದ್ದು, ಗ್ರಾಹಕರು ಚೌಕಾಸಿ ಮಾಡಿ ಖರೀದಿಸುತ್ತಿರುವುದು ಕಂಡು ಬಂದಿತು.

ಸಂಕ್ರಾಂತಿ ಹಬ್ಬಕ್ಕೆ ಹೋಲಿಸಿದರೆ ಎಲ್ಲ ಹೂಗಳ ದರವೂ ಈಗ ಹೆಚ್ಚಾಗಿದೆ. ದೇವಸ್ಥಾನಗಳು ತಳಿರು, ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು ವಿಶೇಷ ಪೂಜೆ, ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಭರದ ಸಿದ್ಧತೆಯಾಗಿದೆ. ಭಕ್ತರಿಗೆ ಶಿವನಾಮ ಸ್ಮರಣೆ, ಜಪ, ತಪಗಳಿಗೆ ವ್ಯವಸ್ಥೆ ಮಾಡಲಾಗಿದೆ.

ಮೆಣಸಿನಕಾಯಿ ತುಟ್ಟಿ:

ಹಸಿ ಮೆಣಸಿನಕಾಯಿ ದರ ಗಣನೀಯವಾಗಿ ಏರಿದ್ದು, ಕೆಜಿಗೆ ₹ 60ರಿಂದ 80ರ ವರೆಗೆ ಮಾರಾಟವಾಗುತ್ತಿದೆ. ಈ ಬಾರಿ ಮಳೆಯಿಂದಾಗಿ ಹಲವೆಡೆ ಮೆಣಸಿನಕಾಯಿ ಬೆಳೆ ಹಾಳಾಗಿತ್ತು. ನಂತರ ಬೆಳೆದ ಮೆಣಸಿನಕಾಯಿ ಮಾರುಕಟ್ಟೆಗಳಿಗೆ ಪೂರೈಕೆಯಾಗುವುದು ವಿಳಂಬವಾಗಿದೆ. ಹಾಗಾಗಿ, ನಿರಂತರವಾಗಿ ಬೆಲೆ ಏರಿದೆ’ ಎಂದು ತರಕಾರಿ ವ್ಯಾಪಾರಸ್ಥರು ಹೇಳುತ್ತಾರೆ.

ಶಿವನಿಗೆ ಪೂಜೆ:

ಭಾನುವಾರ ಶಿವರಾತ್ರಿ ಹಬ್ಬದ ನಿಮಿತ್ತ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಫೆ. 15ರಂದು ವಿಶೇಷ ಪೂಜೆ ನಡೆಯಲಿವೆ. ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರಿಗೆ ಹರಿಯಾಣ ಮಾದರಿ ಸೇವಾ ಭದ್ರತೆ ನೀಡಲು ಒತ್ತಾಯ
ಸ್ವಂತ ಖರ್ಚಲ್ಲಿ ವಿದ್ಯಾರ್ಥಿಗಳನ್ನುಕಾಪ್ಟರಲ್ಲಿ ಹಾರಾಡಿಸಿದ ಜಮೀರ್‌