
ಕನ್ನಡಪ್ರಭ ವಾರ್ತೆ ಸೇಡಂ
ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮಾರಕ ಚಿರಾಯು ಆಸ್ಪತ್ರೆಯ ಸಹಯೋಗದೊಂದಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಯೋಜಿಸಿದ ಉಚಿತ ಹೃದ್ರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಕಳೆದ 2016ರಲ್ಲಿ ಕಲಬುರಗಿಯಲ್ಲಿ ಆರಂಭಗೊಂಡ ಜಯದೇವ ಆಸ್ಪತ್ರೆ ದೊಡ್ಡ ಸಾಧನೆ ಮಾಡಿದೆ. ಇಲ್ಲಿವರೆಗೂ ಸರಿ ಸುಮಾರು 6ಲಕ್ಷ ಜನ ಇದರ ಲಾಭ ಪಡೆದುಕೊಂಡಿದ್ದಾರೆ. 54 ಸಾವಿರ ಜನರಿಗೆ ವಿವಿಧ ರೀತಿಯ ಚಿಕಿತ್ಸೆ ನೀಡಲಾಗಿದ್ದು, 1 ಸಾವಿರಕ್ಕೂ ಅಧಿಕ ಜನರಿಗೆ ಬೈಪಾಸ್ ಸರ್ಜರಿ ಮಾಡಲಾಗಿದೆ. ಪ್ರತಿನಿತ್ಯ 500ಕ್ಕೂ ಅಧಿಕ ಹೊರ ರೋಗಿಗಳ ತಪಾಸಣೆ ನಡೆಯುತ್ತಿದೆ. ಆಸ್ಪತ್ರೆಯ ಕುರಿತು ಅರಿವು ಮೂಡಿಸುವದಕ್ಕಾಗಿ ತಾಲೂಕುಗಳಿಗೆ ತೆರಳಿ ಹೃದ್ರೋಗದ ತಪಾಸಣೆ ನಡೆಸುತ್ತಿರುವುದು ಇದೇ ಮೊದಲ ಪ್ರಯತ್ನವಾಗಿದೆ ಎಂದು ಬಣ್ಣಿಸಿದರು.
ಹೃದಯ ರೋಗದಂತಹ ಕಾಯಿಲೆ ಬಂದಾಗ ಬಡ ಜನರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಲಕ್ಷಾಂತರ ರು. ದುಡ್ಡು ಹಾಕಲು ಕಷ್ಟವಾಗುತ್ತಿರುವದನ್ನು ಗಮನಿಸಿ, ಬಡವರ ಅನುಕೂಲಕ್ಕಾಗಿ ಆಸ್ಪತ್ರೆಗಳನ್ನು ತಂದಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಇಂತಹ ಶಿಬಿರ ನಡೆಸುವಂತೆ ಜಯದೇವ ಸಂಸ್ಥೆಯ ಅಧಿಕಾರಿಗಳಿಗೆ ಈಗಾಗಲೇ ಸಲಹೆ ನೀಡಿದ್ದೇನೆ. ನಾನು ಸಚಿವನಾಗಿ ಈ 8 ವರ್ಷದ ಅವಧಿಯಲ್ಲಿ ಜನರ ಆರೋಗ್ಯ ರಕ್ಷಣೆಗೆ ಏನೆಲ್ಲಾ ಸೌಲಭ್ಯ ಕಲ್ಪಿಸಬೇಕು ಆ ನಿಟ್ಟಿನಲ್ಲಿ ಬಹುತೇಕ ಎಲ್ಲಾ ರೀತಿಯ ಆಸ್ಪತ್ರೆಗಳನ್ನು ಕಲಬುರಗಿಗೆ ತಂದಿದ್ದೇನೆ ಎಂದರು.ಕಲಬುರಗಿ ಶಾಖೆಯ ಜಯದೇವ ಸಂಸ್ಥೆಯ ವೈದ್ಯಕೀಯ ಆಡಳಿತ ಅಧಿಕಾರಿ ಡಾ.ರುದ್ರಪ್ಪ ಗುಗವಾಡ ಮಾತನಾಡಿ, ಮುಂದಿನ ದಿನಗಳಲ್ಲಿ ಮುಧೋಳ ಮತ್ತು ಸುಲೇಪೇಟನಲ್ಲಿಯೂ ತಪಾಸಣೆ ಶಿಬಿರ ನಡೆಸುವ ಉದ್ದೇಶ ಹೊಂದಲಾಗಿದೆ. ಜಯದೇವ ಸಂಸ್ಥೆ ನಾಡಿನ ಹೆಮ್ಮೆಯ ಸಂಸ್ಥೆಯಾಗಿದ್ದು, ಇದು ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುತ್ತದೆ ಎಂದರು.
ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿದರು. ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ನಳ್ಳಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಭೂನ್ಯಾಯ ಮಂಡಳಿ ಅಧ್ಯಕ್ಷ ರವೀಂದ್ರ ನಂದಿಗಾಮ, ಶಿಬಿರದ ಸಂಚಾಲಕ ಮಹೇಶ ಪಾಟೀಲ್ ತರನಳ್ಳಿ ಇದ್ದರು.