ಕನ್ನಡಪ್ರಭ ವಾರ್ತೆ ಸಾಗರ ಹಿರಿಯ ಸಾಹಿತಿ ಡಾ. ನಾ.ಡಿಸೋಜ ಅವರಿಗೆ ರಾಜ್ಯ ಸರ್ಕಾರ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಘೋಷಿಸಿದೆ. ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಡಿಸೋಜ ಅವರಿಗೆ ಪಂಪ ಪ್ರಶಸ್ತಿ ದೊರಕಿರುವುದು ಅವರ ಸಾಹಿತ್ಯ ಕೃಷಿಯ ಹಿರಿಮೆಯಾಗಿದೆ.
ಸರಳ, ಸಜ್ಜನಿಕೆ ವ್ಯಕ್ತಿತ್ವದ ಡಿಸೋಜ ತಮ್ಮ ಬರವಣಿಗೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಬವಣೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮುಳುಗಡೆ ಸಂತ್ರಸ್ತರ ವಸ್ತು ವಿಷಯದ ಹಲವಾರು ಕತೆ, ಕಾದಂಬರಿಗಳು ಪ್ರಕಟವಾಗಿವೆ. ದ್ವೀಪ ಎನ್ನುವ ಕಾದಂಬರಿ ಚಲನಚಿತ್ರವೂ ಆಗಿದೆ. ಅದೇ ರೀತಿ ಸಾಗರದ ವರದಾನದಿ ದಡದ ಜನರ ಬವಣೆಗಳ ಬಗ್ಗೆಯೂ ಡಿಸೋಜ ಬರೆದಿದ್ದಾರೆ. ಕಾಗೋಡು ಚಳವಳಿಗೆ ನಾಂದಿಯಾದ ಕೊಳಗವನ್ನು ವಸ್ತುವಿಷಯವನ್ನಾಗಿಸಿಕೊಂಡು ಕೊಳಗ ಎನ್ನುವ ಕಾದಂಬರಿ ಬರೆದಿದ್ದಾರೆ.
ತಮ್ಮ ಜನಪರತೆಯನ್ನು ಕೇವಲ ಬರವಣಿಗೆಗೆ ಸೀಮಿತಗೊಳಿಸದೇ ಜನಪರ ವಿಷಯಗಳ ಹೋರಾಟಗಳಲ್ಲಿಯೂ ನಾ.ಡಿಸೋಜ ಸಕ್ರಿಯವಾಗಿ ಭಾಗವಹಿಸಿದ್ದರು. ಬಹಳ ವರ್ಷಗಳ ಹಿಂದೆ ತಾಲೂಕಿನ ಇಕ್ಕೇರಿಯ ಸುತ್ತಮುತ್ತ ಬಂಗಾರದ ಗಣಿಗಾರಿಕೆ ನಡೆಯುತ್ತದೆ ಎಂದಾಗ ಜನಜಾಗೃತಿಯ ವಿಷಯದಲ್ಲಿ ಡಿಸೋಜ ಸಕ್ರಿಯ ಪಾತ್ರ ವಹಿಸಿದ್ದರು. ರೈಲ್ವೆ ಹೋರಾಟ ಸಮಿತಿ ಗೌರವಾಧ್ಯಕ್ಷರಾಗಿ ಗಾಂಧಿ ಮಾರ್ಗದ ಹೋರಾಟ ನಡೆಸಿ ಸಾಗರಕ್ಕೆ ಬ್ರಾಡ್‌ಗೇಜ್ ರೈಲು ತರುವಲ್ಲಿ ಡಿಸೋಜ ಪ್ರಮುಖ ಪಾತ್ರ ವಹಿಸಿದ್ದರು. ತೀರಾ ಇತ್ತೀಚೆಗೆ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ತೆಗೆದುಕೊಂಡು ಹೋಗುವ ಪ್ರಸ್ತಾಪವಾದಾಗ ನಡೆದ ಹೋರಾಟದಲ್ಲಿಯೂ ಡಿಸೋಜ ಮುಂಚೂಣಿಯಲ್ಲಿದ್ದರು. ಜನಪರ ಕಾಳಜಿಯೇ ನಾಡಿಮಿಡಿತವಾಗಿರುವ ಡಿಸೋಜ ಅವರಿಗೆ ಪಂಪ ಪ್ರಶಸ್ತಿ ಬಂದಿರುವುದು ಸಾಹಿತ್ಯಾಭಿಮಾನಿಗಳಲ್ಲಿ ಸಂಸತಕ್ಕೆ ಕಾರಣವಾಗಿದೆ.ಶಾಸಕರಿಂದ ಅಭಿನಂದನೆ:
ಈ ಸಂದರ್ಭದಲ್ಲಿ ಪ್ರಮುಖರಾದ ಚೇತನರಾಜ್ ಕಣ್ಣೂರು, ಐ.ಎನ್.ಸುರೇಶಬಾಬು, ಡಿ.ದಿನೇಶ್, ಸೋಮಶೇಖರ್ ಲ್ಯಾವಿಗೆರೆ, ಅಶೋಕ ಬೇಳೂರು, ಗಣಪತಿ ಮಂಡಗಳಲೆ ಮತ್ತಿತರರು ಇದ್ದರು.
ಪಂಪ ಪ್ರಶಸ್ತಿಗೆ ಭಾಜನರಾಗಿರುವ ಸಾಹಿತಿ ನಾ.ಡಿಸೋಜ ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಿದರು.