ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದಟ್ಟವಾದ ಮಂಜು. ರಾತ್ರಿಯಿಡೀ ಸುರಿದ ಇಬ್ಬನಿಗೆ ತಂಪಾದ ವಾತಾವರಣ. ಬೀಸುತ್ತಿರುವ ಗಾಳಿ, ಹೊರಗೆ ತಣ್ಣನೇ ಮೈ ನಡುಗುವ ಚಳಿ. ಗುರುವಾರ ಬೆಳ್ಳಂ ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಕಂಡ ಮನಕ್ಕೆ ಮುದ ನೀಡುವ ದೃಶ್ಯಗಳಿವು.
ಆವರಿಸಿದ ದಟ್ಟ ಮಂಜುದಿನವಿಡೀ ಬೀಳುತ್ತಿರುವ ದಟ್ಟ ಮಂಜು ಚಿಕ್ಕಬಳ್ಳಾಪುರ ನಗರ ಮತ್ತು ಹೊರವಲಯಾದ್ಯಂತ ಹರಡಿತ್ತು. ಎದುರಿನವರ ಮುಖ ಕಾಣಿಸದಂತಹ ಮಂಜು, ಸಂಜೆ ಹೊತ್ತಿನವರೆಗೂ ಮುಂದುವರೆದಿತ್ತು. ತಡ ಹೊತ್ತಿನವರೆಗೆ ಮಂಜು ಆವರಿಸಿದ್ದರಿಂದ ಬೆಳಗ್ಗೆ ಜನತೆ ವಾಕಿಂಗ್ ಬರಲು ಹಿಂದೇಟು ಹಾಕುವಂತಾಗಿದೆ. ಕೆಲವರೂ ಮಂಜಿನಲ್ಲೇ ಹೊರ ಬಂದು ವಾಕಿಂಗ್ ಮಾಡಿದರು..
ನಗರ ಮತ್ತು ಗ್ರಾಮಾಂತರ ಭಾಗಗಳ ಸುತ್ತಮುತ್ತ ಕಳೆದ ನಾಲ್ಕೈದು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿ ಬೆಳಗ್ಗೆ ಎಂಟಾದರೂ ಆವರಿಸಿದ ಮಂಜು, ಚುಮು ಚುಮು ಚಳಿ ಜನರನ್ನು ಥರಗುಟ್ಟುಸುತ್ತಿದೆ. ನಂದಿಗಿರಿ, ಸ್ಕಂದಗಿರಿ, ಗೋರ್ವಧನಗಿರಿ, ಚನ್ನಗಿರಿ, ಜಾಲಾರಿ ನರಸಿಂಹಸ್ವಾಮಿ ಬೆಟ್ಟ ಸಂಪೂರ್ಣವಾಗಿ ಮಂಜಿನಿಂದ ಮುಚ್ಚಿಹೋಗಿ ಜನರಿಗೆ ಮಲೆನಾಡಿನ ಅನುಭವ ನೀಡುತ್ತಿದೆ.ಉಷ್ಣಾಂಶ ಕುಸಿತ:
ವಾತಾವರಣದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮಂಜಿನ ಪ್ರಮಾಣ ಕೂಡಾ ಏರಿಕೆಯಾಗುತ್ತಿರುವುದು ಕಂಡ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದಲ್ಲಿ ಶೀತ ಗಾಳಿ ಬಗ್ಗೆ ಕೇಳಿದ್ದ ಇಲ್ಲಿನ ಜನತೆ, ಕಳೆದ ಐದಾರು ದಿನಗಳಿಂದ ಅದರ ಅನುಭವವನ್ನು ಇಲ್ಲಿಯೇ ಕಾಣುವಂತಾಗಿದೆ. ಮಂಜಿನ ಎಫೆಕ್ಟ್‌ನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಯಾಗಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.ದಟ್ಟ ಮಂಜಿನಿಂದಾಗಿ ವಾಹನಗಳ ಹೆಡ್‌ಲೈಟ್ ಆರಿಸದೆ ಸಂಚರಿಸುವಂತಾಗಿದೆ.ಚುಮು ಚುಮು ಚಳಿಯಿಂದ ತಪ್ಪಿಸಿಕೊಳ್ಳಲು ಜನತೆ ಬೆಂಕಿ ಕಾಯಿಸಲು ಮುಂದಾಗುತ್ತಿದ್ದು, ಕೆಲಸ ಕಾರ್ಯಗಳಿಗೆ ಬೆಳಗ್ಗೆ ಹೊರಡುವ ಜನತೆ ಬಸ್ ನಿಲ್ದಾಣಗಳ ಸೇರಿದಂತೆ ಅಲ್ಲಲ್ಲಿ ಗುಂಪಾಗಿ ನಿಂತು ಬೆಂಕಿ ಕಾಯಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.