ಉಪ್ಪಿನಂಗಡಿ: ರು.೧೦ರ ನಾಣ್ಯ ಸ್ವೀಕರಿಸಲು ಈಗಲೂ ಜನತೆ ಹಿಂದೇಟು

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಈ ಹಿಂದೊಮ್ಮೆ ಅಪಪ್ರಚಾರ ಮಾಡಿ ೧೦ರ ನಾಣ್ಯವನ್ನು ಜನತೆ ಸ್ವೀಕರಿಸಲು ಹಿಂದೇಟು ಹಾಕುವಂತೆ ಮಾಡಲಾಗಿತ್ತಾದರೂ ಬಳಿಕದ ದಿನಗಳಲ್ಲಿ ಅಪಪ್ರಚಾರ ನಿಂತಿದೆಯಾದರೂ, ಜನರ ಮನಸ್ಥಿತಿ ಮಾತ್ರ ಬದಲಾದಂತಿಲ್ಲ.ಪ್ರಸಕ್ತ ಮಾರುಕಟ್ಟೆಯಲ್ಲಿ ಆನ್‌ಲೈನ್ ಪೇಮೆಂಟ್‌ನಿಂದಾಗಿ ಸಣ್ಣ ಮೊತ್ತದ ನೋಟುಗಳು ಬಳಕೆಯಾಗುತ್ತಿರುವುದೇ ಕಡಿಮೆಯಾಗುತ್ತಿದ್ದು, ಇದರಿಂದಾಗಿ ವ್ಯಾಪಾರ ಕೇಂದ್ರಗಳಲ್ಲಿ ಹತ್ತರ ನೋಟುಗಳ ಕೊರತೆ ಕಾಡುತ್ತಿದೆ. ಇದುವೇ ಸಮಸ್ಯೆಯಾಗಿ ಕಾಡಿದೆ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಭಾರತ ಸರ್ಕಾರರವೇ ಚಲಾವಣೆಗೆ ತಂದಿರುವ ೧೦ ಹಾಗೂ ೨೦ರ ನಾಣ್ಯಗಳನ್ನು ಜನತೆ ತಿರಸ್ಕರಿಸುತ್ತಿರುವುದರಿಂದ ಎಲ್ಲೆಡೆ ಗೊಂದಲದ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ.ಈ ಹಿಂದೊಮ್ಮೆ ಅಪಪ್ರಚಾರ ಮಾಡಿ ೧೦ರ ನಾಣ್ಯವನ್ನು ಜನತೆ ಸ್ವೀಕರಿಸಲು ಹಿಂದೇಟು ಹಾಕುವಂತೆ ಮಾಡಲಾಗಿತ್ತಾದರೂ ಬಳಿಕದ ದಿನಗಳಲ್ಲಿ ಅಪಪ್ರಚಾರ ನಿಂತಿದೆಯಾದರೂ, ಜನರ ಮನಸ್ಥಿತಿ ಮಾತ್ರ ಬದಲಾದಂತಿಲ್ಲ.

* ಹತ್ತರ ನೋಟಿನ ಕೊರತೆ ಕಾಡುತ್ತಿದ್ದರೂ ನಾಣ್ಯಗಳ ಚಲಾವಣೆಗೆ ನಿರಾಸಕ್ತಿ:ಪ್ರಸಕ್ತ ಮಾರುಕಟ್ಟೆಯಲ್ಲಿ ಆನ್‌ಲೈನ್ ಪೇಮೆಂಟ್‌ನಿಂದಾಗಿ ಸಣ್ಣ ಮೊತ್ತದ ನೋಟುಗಳು ಬಳಕೆಯಾಗುತ್ತಿರುವುದೇ ಕಡಿಮೆಯಾಗುತ್ತಿದ್ದು, ಇದರಿಂದಾಗಿ ವ್ಯಾಪಾರ ಕೇಂದ್ರಗಳಲ್ಲಿ ಹತ್ತರ ನೋಟುಗಳ ಕೊರತೆ ಕಾಡುತ್ತಿದೆ. ಈ ಸಮಯದಲ್ಲಿ ಹತ್ತರ ನಾಣ್ಯಗಳನ್ನು ನೀಡಲು ಮುಂದಾದರೆ ನಿರ್ದಾಕ್ಷಿಣ್ಯವಾಗಿ ನಾಣ್ಯ ಬೇಡವೆಂದು ತಿರಸ್ಕರಿಸುತ್ತಿರುವ ಪ್ರಸಂಗಗಳೇ ನಡೆಯುತ್ತಿದೆ. ಈ ವೇಳೆ ಗ್ರಾಹಕರೊಂದಿಗೆ ಕಾನೂನು ಮಾತನಾಡಿದರೆ ಗ್ರಾಹಕನನ್ನು ಕಳೆದುಕೊಳ್ಳಬೇಕಾಗುವುದೆಂಬ ಭೀತಿಯಿಂದ ವ್ಯಾಪಾರಿಗಳು ಅಸಹಾಯಕತೆಯಿಂದ ಮೌನ ವಹಿಸುತ್ತಾರೆ. ಈ ಕಾರಣದಿಂದ ಸರ್ಕಾರ ಚಲಾವಣೆಗೆ ತಂದಿರುವ ನಾಣ್ಯಗಳನ್ನು ವಿನಾಃ ಕಾರಣ ತಿರಸ್ಕರಿಸುವ ನಾಗರಿಕರ ನಿಲುವನ್ನು ತಿದ್ದುವ ಕಾರ್ಯ ನಡೆಯಬೇಕಾಗಿದೆ.---

ಹತ್ತರ ನೋಟು ಯಥೇಚ್ಛ ಲಭ್ಯವಿಲ್ಲ. ವ್ಯವಹಾರದಲ್ಲಿ ಮೊತ್ತವನ್ನು ಹಿಂತಿರುಗಿಸುವ ಸನ್ನಿವೇಶದಲ್ಲಿ ಹತ್ತರ ನಾಣ್ಯವನ್ನು ನೀಡಿದರೆ ಹಾವು ಕಂಡತೆ ಬೆಚ್ಚಿ ಬೀಳುತ್ತಾರೆ. ಇದು ಚಲಾವಣೆಯಾಗದ ನಾಣ್ಯವೆಂದು ಅವರೇ ವಾದಿಸುತ್ತಾರೆ. ಈ ಬಗ್ಗೆ ನಾವೆಷ್ಟೇ ಅರಿವು ಮೂಡಿಸಲು ಯತ್ನಿಸಿದರೂ ಬೇರೆ ನೋಟು ಕೊಡಿ ಎಂದು ನಮ್ಮ ಮಾತನ್ನು ಕೊನೆಗೊಳಿಸುತ್ತಾರೆ. ದಯವಿಟ್ಟು ಆಡಳಿತ ವ್ಯವಸ್ಥೆ ೧೦ ಮತ್ತು ೨೦ ರ ಚಲಾವಣೆಯಲ್ಲಿ ಜನರ ಮನದಲ್ಲಿ ಉಂಟಾಗಿರುವ ಅಪನಂಭಿಕೆಯನ್ನು ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

। ವಿವೇಕಾನಂದ ಪ್ರಭು, ಉಪ್ಪಿನಂಗಡಿಯ ಯುವ ವರ್ತಕ

ತಪ್ಪು ಅಭಿಪ್ರಾಯವನ್ನು ಜನರ ಮನದಲ್ಲಿ ಮೂಡಿಸಿದ ಫಲವಾಗಿ ಇಂದು ಜನರು ೧೦ ಮತ್ತು ೨೦ರ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಚಲಾವಣೆಗೆ ತಂದ ನೋಟುಗಳನ್ನಾಗಲಿ, ನಾಣ್ಯಗಳನ್ನಾಗಲಿ ಯಾರೂ ಕೂಡ ತಿರಸ್ಕರಿಸುವಂತಿಲ್ಲ. ವೈಯಕ್ತಿಕ ನೆಲೆಯಲ್ಲಿ ನಾಣ್ಯಗಳನ್ನು ತಿರಸ್ಕರಿಸಿದ ಪ್ರಕರಣವನ್ನು ಪ್ರಶ್ನಿಸಬಹುದಾದರೂ , ಕೃತ್ಯವನ್ನು ದೃಢೀಕರಿಸುವುದು ಕಷ್ಟ ಸಾಧ್ಯ. ಆದರೆ ಸಂಸ್ಥೆಗಳು ನಿರಾಕರಿಸಿದರೆ ಅದರ ಮೇಲೆ ಆಡಳಿತಾತ್ಮಕ ಕ್ರಮ ಕೈಗೊಳ್ಳಬಹುದಾಗಿದೆ. ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುವುದು ಆರ್‌ಬಿಐ ವ್ಯಾಪ್ತಿಯಲ್ಲಿ ಬರುವ ಅಪರಾಧ ಕೃತ್ಯವಾಗಿದೆ. ಪೊಲೀಸ್ ಇಲಾಖೆಯಲ್ಲಿ ಖೋಟಾ ನೋಟುಗಳ ವಿಚಾರದಲ್ಲಿ ಪ್ರಕರಣ ದಾಖಲಿಸುವ ಅವಕಾಶವಿದೆ.

ರವಿ ಬಿ.ಎಸ್. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ

Share this article