ನಗರಸಭೆಯ 31ನೇ ವಾರ್ಡಿನಲ್ಲಿ ಗುಡ್ಡಳ್ಳಿ ಇದೆ. ಕಾರವಾರ ನಗರದಿಂದ 5 ಕಿಮೀ ದೂರದ ಗುಡ್ಡದ ಮೇಲೆ ಈ ಊರಿದೆ. ದಶಕಗಳಿಂದ ರಸ್ತೆ ನಿರ್ಮಿಸುವಂತೆ ಅಂಗಲಾಚುತ್ತಿದ್ದರೂ ಕಡಿದಾದ ಗುಡ್ಡಕ್ಕೆ ಸಾರ್ವಕಾಲಿಕ ರಸ್ತೆ ಇನ್ನೂ ಆಗಿಲ್ಲ.
ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿಯಲ್ಲೇ ಇರುವ ಗುಡ್ಡಳ್ಳಿ ಎಂಬ ಊರಿಗೆ ಹೋಗಲು ರಸ್ತೆ ಇಲ್ಲದೆ ಭಾನುವಾರ ಬೆಳಗ್ಗೆ ಮೃತ ವ್ಯಕ್ತಿಯ ಶರೀರವನ್ನು ಮರದ ಕಂಬಕ್ಕೆ ಬಿಗಿದು ಹೊತ್ತು ಸಾಗಿಸಿದ ಘಟನೆ ನಡೆದಿದೆ.
ಗುಡ್ಡಳ್ಳಿಯ ರಾಮ ಮುನ್ನಾ ಗೌಡ ಅವರನ್ನು ಅನಾರೋಗ್ಯದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ಶನಿವಾರ ರಾತ್ರಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರಾತ್ರಿ 12 ಗಂಟೆ ಸುಮಾರಿಗೆ ಹೃದಯಾಘಾತವಾಗಿ ಮೃತಪಟ್ಟರು. ಆದರೆ, ಗುಡ್ಡಳ್ಳಿ ಊರಿಗೆ ಶವ ಕೊಂಡೊಯ್ಯಲು ಸಮರ್ಪಕ ರಸ್ತೆಯೇ ಇಲ್ಲದೆ ಅನಿವಾರ್ಯವಾಗಿ ಶವವನ್ನು ಕಂಬಳಿಯಲ್ಲಿ ಕಟ್ಟಿ ಮರದ ಕಂಬಕ್ಕೆ ಬಿಗಿದು ನಾಲ್ಕಾರು ಜನರು ಹೊತ್ತುಕೊಂಡೇ ಸುಮಾರು 3- 4 ಕಿಮೀ ಕ್ರಮಿಸಬೇಕಾಯಿತು. ರಸ್ತೆ ಇಲ್ಲದೆ ಅನಿವಾರ್ಯವಾಗಿ ಅಮಾನವೀಯವಾಗಿ ಶವ ಸಾಗಿಸಬೇಕಾಯಿತು. ನಗರಸಭೆಯ 31ನೇ ವಾರ್ಡಿನಲ್ಲಿ ಗುಡ್ಡಳ್ಳಿ ಇದೆ. ಕಾರವಾರ ನಗರದಿಂದ 5 ಕಿಮೀ ದೂರದ ಗುಡ್ಡದ ಮೇಲೆ ಈ ಊರಿದೆ. ದಶಕಗಳಿಂದ ರಸ್ತೆ ನಿರ್ಮಿಸುವಂತೆ ಅಂಗಲಾಚುತ್ತಿದ್ದರೂ ಕಡಿದಾದ ಗುಡ್ಡಕ್ಕೆ ಸಾರ್ವಕಾಲಿಕ ರಸ್ತೆ ಇನ್ನೂ ಆಗಿಲ್ಲ. ಹಾಗೂ ಹೀಗೂ ಬೈಕ್ ಮಾತ್ರ ಹೋಗುವಂತಹ ದಾರಿ ಇದೆ. ಇರುವ ಕಚ್ಚಾ ರಸ್ತೆಯೂ ಮಳೆಗಾಲದಲ್ಲಿ ಅಲ್ಲಲ್ಲಿ ಕೊಚ್ಚಿಹೋಗಿದೆ. ಗುಡ್ಡಳ್ಳಿಯ ಜನತೆ ಅನಾರೋಗ್ಯಕ್ಕೊಳಗಾದರೆ ಅವರನ್ನು ಕಂಬಳಿಯಲ್ಲಿ ಕಟ್ಟಿಕೊಂಡು ಹೊತ್ತು ತರಬೇಕಾದ ಪರಿಸ್ಥಿತಿ ಇದೆ. ಶನಿವಾರ ರಾತ್ರಿ ಯುವಕನಿಗೆ ಹಾವು ಕಚ್ಚಿದ್ದು, ಆತನನ್ನು ಬೈಕಿನಲ್ಲಿ ಸಾಹಸದಿಂದ ಕರೆತರಬೇಕಾಯಿತು.ಗುಡ್ಡಳ್ಳಿಗೆ ಸುಮಾರು 3 ಕಿಮೀ ದೂರದ ತನಕ ಕಚ್ಚಾರಸ್ತೆ ಮಾಡಲಾಗಿತ್ತು. ಈಗ ಒಂದೂವರೆ ಕಿಮೀ ಉದ್ದದ ರಸ್ತೆ ನಿರ್ಮಿಸಬೇಕಾಗಿದೆ. ಹಿಂದೆ ನಿರ್ಮಾಣವಾದ ರಸ್ತೆಯೂ ಮಳೆಗಾಲದಲ್ಲಿ ಅಲ್ಲಲ್ಲಿ ಕೊಚ್ಚಿಹೋಗಿದ್ದರಿಂದ ಅದನ್ನೂ ಸರಿಪಡಿಸಬೇಕಾಗಿದೆ. ಆಧುನಿಯ ಯುಗದಲ್ಲಿ ನಾವಿದ್ದರೂ ಗುಡ್ಡಳ್ಳಿಯ ಜನತೆ ಇನ್ನೆಷ್ಟು ದಿನಗಳ ಕಾಲ ಈ ಬವಣೆ ಅನುಭವಿಸಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಟೆಂಡರ್: ಗುಡ್ಡಳ್ಳಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿದೆ. ರಸ್ತೆ ನಿರ್ಮಾಣ ಕಾರ್ಯ ಆಗಬೇಕಾಗಿದೆ. ಅಲ್ಲಿನ ಜನರ ಪರಿಸ್ಥಿತಿಯ ಬಗ್ಗೆ ಅರಿವಿದೆ. ಆದಷ್ಟು ಬೇಗ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸುತ್ತೇವೆ ಎಂದು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.