ಕರಾವಳಿಯಲ್ಲಿ ಹೊಸ ವರ್ಷ 2025ನ್ನು ಅದ್ದೂರಿಯಾಗಿ ಸ್ವಾಗತಿಸಿದ ಜನತೆ

KannadaprabhaNewsNetwork | Published : Jan 1, 2025 12:00 AM

ಸಾರಾಂಶ

ಹೊಸ ವರ್ಷಾಚರಣೆಗಾಗಿ ಪ್ರವಾಸಿಗರ ದಂಡು ಮಂಗಳೂರು ಬೀಚ್‌ಗಳಿಗೆ ಆಗಮಿಸಿದೆ. ಕರಾವಳಿಯ ದೇವಸ್ಥಾನಗಳಲ್ಲೂ ಹೂ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಮಂಗಳೂರಿನ ಸುಮಾರು 49 ಕಡೆಗಳಲ್ಲಿ ಹೊಸ ವರ್ಷದ ಪಾರ್ಟಿಗೆ ಪೊಲೀಸರು ಪರವಾನಗಿ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯಲ್ಲಿ ಹೊಸ ವರ್ಷ 2025ರ ಆಗಮನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮಂಗಳೂರಿನಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರೆ, ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪುನಸ್ಕಾರ, ಪ್ರಾರ್ಥನೆಗಳು ನೆರವೇರಿತು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ನಗರದಾದ್ಯಂತ ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಸಲಾಯಿತು. ನಗರದ ಹಲವು ಕಡೆಗಳಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಲಾಯಿತು.

ಹೊಸವರ್ಷ ಆಚರಣೆಗೆ ಪುಣ್ಯ ಕ್ಷೇತ್ರಗಳಿಗೆ ಭಕ್ತರ ದಂಡು ಆಗಮಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆಗೆ ತಂಡೋಪತಂಡವಾಗಿ ಭಕ್ತರು ಆಗಮಿಸಿದ್ದಾರೆ. ಮಂಗಳವಾರವೇ ಶ್ರೀಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ಅಲ್ಲದೆ ಮಂಗಳವಾರ ರಾತ್ರಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲೇ ವಾಸ್ತವ್ಯ ಹೂಡಿ ಹೊಸ ವರ್ಷವನ್ನು ಸ್ವಾಗತಿಸಿದರು. ಬೆಂಗಳೂರು, ಮೈಸೂರು, ಹುಬ್ಬಳಿ ಸೇರಿ ಉತ್ತರ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಭಕ್ತರು ಆಗಮಿಸಿದ್ದಾರೆ. ಅಲ್ಲದೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಭಕ್ತಗಡಣ ಆಗಮಿಸಿದೆ.

ಮಂಗಳೂರಲ್ಲಿ ಬೀಚ್‌ ಪಾರ್ಟಿ: ಮಂಗಳೂರಿನಲ್ಲಿ ಹಲವು ವರ್ಷಗಳ ಬಳಿಕ ಹೊಸ ವರ್ಷದ ಬೀಚ್ ಪಾರ್ಟಿಗಳಿಗೆ ಈ ಬಾರಿ ಅನುಮತಿ ನೀಡಲಾಗಿದೆ. ಹೊರವಲಯದ ಪಣಂಬೂರು ಬೀಚ್‌ನಲ್ಲಿ ಮಂಗಳವಾರ ರಾತ್ರಿ ಅದ್ದೂರಿ ನೈಟ್ ಪಾರ್ಟಿ ನಡೆಸಲಾಗಿದೆ. ಲೇ ಸ್ಪೇರೋ ರೆಸಾರ್ಟ್ ಆಶ್ರಯದಲ್ಲಿ ನೈಟ್ ಬೀಚ್ ಪಾರ್ಟಿ ಆಯೋಜನೆಗೊಂಡಿತ್ತು. ಇದರಲ್ಲಿ ಲೈವ್ ಬ್ಯಾಂಡ್, ಡಿಜೆ, ಡ್ಯಾನ್ಸ್ ಶೋ, ಮ್ಯೂಸಿಕಲ್ ನೈಟ್‌ ಹಬ್ಬ, ಮ್ಯಾಜಿಕ್ ಶೋ ಜೊತೆಗೆ ಭರ್ಜರಿ ಫೈರ್ ವರ್ಕ್ಸ್ ಮೂಲಕ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಯಿತು. ಮಧ್ಯರಾತ್ರಿ 12 ಗಂಟೆ ವರೆಗೆ ಮುಕ್ತವಾಗಿ ಪಾರ್ಟಿ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಬೀಚ್ ನೈಟ್ ಪಾರ್ಟಿಯ ಎಲ್ಲ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು, ಬೀಚ್ ನೈಟ್ ಪಾರ್ಟಿ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಬಿಗು ಭದ್ರತೆ ಕೈಗೊಂಡಿದ್ದರು. ಪ್ರವಾಸಿಗರ ದಂಡು: ಹೊಸ ವರ್ಷಾಚರಣೆಗಾಗಿ ಪ್ರವಾಸಿಗರ ದಂಡು ಮಂಗಳೂರು ಬೀಚ್‌ಗಳಿಗೆ ಆಗಮಿಸಿದೆ. ಕರಾವಳಿಯ ದೇವಸ್ಥಾನಗಳಲ್ಲೂ ಹೂ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಮಂಗಳೂರಿನ ಸುಮಾರು 49 ಕಡೆಗಳಲ್ಲಿ ಹೊಸ ವರ್ಷದ ಪಾರ್ಟಿಗೆ ಪೊಲೀಸರು ಪರವಾನಗಿ ನೀಡಿದ್ದರು.

ಮಂಗಳವಾರ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಬೀಚ್‌ಗಳಿಗೆ ಪ್ರವಾಸಿಗರು ಆಗಮಿಸಿದ್ದಾರೆ. ಮಧ್ಯಾಹ್ನದ ಬಳಿಕ ಬೀಚ್‌ನಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ತೀರಗಳಲ್ಲಿ ಹೆಚ್ಚುವರಿ ಲೈಫ್ ಗಾರ್ಡ್‌ಗಳನ್ನು ನಿಯೋಜಿಲಾಗಿದೆ. ಹೊಸ ವರ್ಷಾಚರಣೆಗೆ ಜರ್ಮನಿಯಿಂದ ಕನ್ನಡಿಗ ಕುಟುಂಬವೊಂದು ಆಗಮಿಸಿದೆ. ‘ನ್ಯೂ ಇಯರ್‌ನ್ನು ಮಂಗಳೂರು ಸಮುದ್ರ ತೀರದಲ್ಲಿ ಸ್ವಾಗತಿಸಲು ಬಂದಿದ್ದೇವೆ. ಮಂಗಳೂರು ಸಮುದ್ರ ತೀರ ತುಂಬಾ ಪ್ರಶಾಂತವಾಗಿದೆ, ನ್ಯೂ ಇಯರ್‌ಗೆ ಮತ್ತಷ್ಟು ಖುಷಿ ಕೊಡುತ್ತಿದೆ. ಸಂಜೆ ಬಳಿಕ ಬೀಚ್ ಸೈಡ್ ಪಾರ್ಟಿಗಳಲ್ಲಿ ಭಾಗವಹಿಸುತ್ತೇವೆ ಎಂದು ಅನಿವಾಸಿ ಕನ್ನಡಿಗರು ಹೇಳಿದ್ದಾರೆ.

ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲೂ ಕಾರ್ಯಕ್ರಮ: ಮಂಗಳೂರಿನ ಖ್ಯಾತ ಸ್ಟಾರ್‌ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಪ್ರವಾಸಿಗರು ಕುಟುಂಬದ ಸದಸ್ಯರೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಜತೆಯಲ್ಲಿ ವಿಶೇಷ ಬಗೆಯ ಆಹಾರ ವೈವಿಧ್ಯತೆ, ಮನರಂಜನೆ, ಡಿಜೆ ಪಾರ್ಟಿಗಳು ನಡೆದರೆ ಹೊರವಲಯದ ರೆಸಾರ್ಟ್‌ಗಳಲ್ಲೂ ಸಂಭ್ರಮದ ಕಾರ್ಯಕ್ರಮ ಆಯೋಜನೆಗೊಂಡಿತು. ಮಾಲ್‌, ಪ್ರವಾಸಿ ತಾಣಗಳಾದ ಬೀಚ್‌ಗಳಲ್ಲಿ ಹೆಚ್ಚಿನ ಜನರು ಜಮಾಯಿಸಿದರೆ ಉಳಿದಂತೆ ಯುವಜನತೆಯಂತೂ ಪಾರ್ಟಿ, ಮೋಜುಗಳಲ್ಲಿ ತಲ್ಲೀನರಾಗಿದ್ದರು.

Share this article