ಚನ್ನಪಟ್ಟಣ: ಗೃಹ ಬಳಕೆ ಅನಿಲ ಬಳಕೆದಾರರು ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ರದ್ದಾಗಲಿದೆ ಎಂದು ಹಬ್ಬಿರುವ ವದಂತಿ ಹಿನ್ನೆಲೆಯಲ್ಲಿ ತಾಲೂಕಿನ ಗ್ಯಾಸ್ ಏಜೆನ್ಸಿಗಳ ಮುಂದೆ ನೂಕುನುಗ್ಗಲು ಏರ್ಪಟ್ಟಿದೆ. ಸರ್ಕಾರ ಇ-ಕೆವೈಸಿಗೆ ಯಾವುದೇ ಕಡೆಯ ದಿನಾಂಕ ನಿಗದಿ ಮಾಡಿಲ್ಲ ಎಂದು ಏಜೆನ್ಸಿಗಳು ಗ್ರಾಹಕರಿಗೆ ಮನವರಿಕೆ ಮಾಡಿಕೊಟ್ಟರೂ ಕೇಳುತ್ತಿಲ್ಲ.
ಕಳೆದ ಮೂರ್ನಾಲ್ಕು ದಿನಗಳಿಂದ ಗ್ಯಾಸ್ ಏಜೆನ್ಸಿ ಕಚೇರಿಗಳಿಗೆ ಗ್ರಾಹಕರು ಮುಗಿಬೀಳುತ್ತಿದ್ದು, ಸರದಿಯಲ್ಲಿ ನಿಂತು ಇ-ಕೆವೈಸಿ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ.ನಗರದ ಕುವೆಂಪುನಗರ ಮೂರನೇ ಅಡ್ಡರಸ್ತೆ ಹಾಗೂ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿನ ಎಚ್.ಪಿ. ಗ್ಯಾಸ್ ಏಜೆನ್ಸಿ ಕಚೇರಿ, ಹೊಂಗನೂರು, ಬಾಣಂತಹಳ್ಳಿ, ಮಳೂರು ಗ್ರಾಮಗಳಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಗಳ ಮುಂದೆ ಬೆಳಗ್ಗೆ 7 ಗಂಟೆಯಿಂದಲೇ ಗ್ರಾಹಕರು ಜಮಾಯಿಸುತ್ತಿದ್ದಾರೆ.
ವದಂತಿ ನಂಬಿದ ಜನ:ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಇ-ಕೆವೈಸಿ ಮಾಡಿಸಿದರೆ ಗ್ಯಾಸ್ ಸಿಲಿಂಡರ್‌ಗೆ ಸಬ್ಸಿಡಿ ದೊರಕಲಿದೆ. ಇಲ್ಲದಿದಲ್ಲಿ ಕಮರ್ಶಿಯಲ್ ಆಗಿ ಮಾರ್ಪಟ್ಟು ಪ್ರತಿ ಸಿಲಿಂಡರ್‌ಗೆ ಕಮರ್ಶಿಯಲ್ ಸಿಲಿಂಡರ್‌ಗೆ ನಿಗದಿಯಾಗಿರುವ ದರ ನೀಡಬೇಕಾಗುತ್ತದೆ ಎಂದು ಪೋಸ್ಟ್ ಹರಿದಾಡಿದೆ. ಇದನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಸಬ್ಸಿಡಿ ಕಡಿತಗೊಳ್ಳುವ ಭೀತಿಯಲ್ಲಿ ಜನ ಇ-ಕೆವೈಸಿ ಮಾಡಿಸುವ ಗ್ಯಾಸ್ ಏಜೆನ್ಸಿಗಳ ಮುಂದೆ ಜಮಾಯಿಸುತ್ತಿದ್ದರೆ, ಇನ್ನು ಕೆಲವರು ಸೈಬರ್ ಸೆಂಟರ್‌ಗಳಿಗೆ ಎಡೆತಾಕುತ್ತಿದ್ದಾರೆ.
ಗ್ಯಾಸ್ ಸಬ್ಸಿಡಿಗೆ ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಯಾವುದೇ ಕಡೆಯ ದಿನಾಂಕ ನಿಗದಿ ಮಾಡಿಲ್ಲ ಎಂದು ಈಗಾಗಲೇ ಆಹಾರ ಇಲಾಖೆ ಸ್ಪಷ್ಟಪಡಿಸಿದ್ದರೂ ಗ್ರಾಹಕರು ಮಾತ್ರ ಗ್ಯಾಸ್ ಏಜೆನ್ಸಿ ಕಚೇರಿ ಮುಂದೆ ನಿಲ್ಲುವುದನ್ನು ಮಾತ್ರ ನಿಲ್ಲಿಸಿಲ್ಲ. ಇನ್ನು ಗ್ಯಾಸ್ ಏಜೆನ್ಸಿಗಳು ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಸರ್ಕಾರ ಯಾವುದೇ ಗಡುವನ್ನು ವಿಧಿಸಿಲ್ಲ, ನಿಮ್ಮ ಬಿಡುವಿನ ವೇಳೆಯಲ್ಲಿ ಬಂದು ಇ-ಕೆವೈಸಿ ಮಾಡಿಸಿಕೊಳ್ಳಿ ಎಂದು ಮನವರಿಕೆ ಮಾಡಿಕೊಡುತ್ತಿದ್ದರೂ ಸಹ ಜನ ಬೆಳಿಗ್ಗೆಯಿಂದ ಸಂಜೆವರೆಗೂ ಸಾಲಿನಲ್ಲಿ ನಿಂತು ಇ-ಕೆವೈಸಿ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದು, ಗ್ಯಾಸ್ ಏಜೆನ್ಸಿ ಸಿಬ್ಬಂದಿಯನ್ನ ಹೈರಾಣಾಗಿಸಿದೆ.ಪೊಟೋ೩೧ಸಿಪಿಟಿ೩:ತಾಲೂಕಿನ ಹೊಂಗನೂರು ಗ್ರಾಮದ ಗ್ಯಾಸ್ ಏಜೆನ್ಸಿ ಕಚೇರಿ ಮುಂದೆ ಇ-ಕೆವೈಸಿ ಮಾಡಿಸಲು ಸರದಿಯಲ್ಲಿ ನಿಂತಿರುವ ಗ್ರಾಹಕರು.
ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಗ್ಯಾಸ್ ಏಜೆನ್ಸಿಯ ಕಚೇರಿಯ ಮುಂದೆ ಇಕೆವೈಸಿ ಮಾಡಿಸಲು ಸರದಿ ಸಾಲಿನಲ್ಲಿ ನಿಂತಿರುವ ಗ್ರಾಹಕರು.